ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200+ ಕ್ಯಾಚ್ಗಳನ್ನು ಹಿಡಿದಿರುವುದು ಕೇವಲ 4 ಆಟಗಾರರು ಮಾತ್ರ. ಈ ಪಟ್ಟಿಗೆ ಹೊಸ ಸೇರ್ಪಡೆ ಇಂಗ್ಲೆಂಡ್ನ ಜೋ ರೂಟ್ (Joe Root). ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಎರಡು ಕ್ಯಾಚ್ ಹಿಡಿಯುವುದರೊಂದಿಗೆ ರೂಟ್ ಟೆಸ್ಟ್ನಲ್ಲಿ 200 ಕ್ಯಾಚ್ಗಳ ಸಾಧನೆ ಮಾಡಿದ್ದಾರೆ.
ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 4ನೇ ಫೀಲ್ಡರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ರಾಹುಲ್ ದ್ರಾವಿಡ್, ಶ್ರೀಲಂಕಾದ ಮಹೇಲ ಜಯವರ್ಧನೆ ಹಾಗೂ ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಈ ಸಾಧನೆ ಮಾಡಿದ್ದರು. ಇದೀಗ ಕೇವಲ 145 ಪಂದ್ಯಗಳ ಮೂಲಕ ರೂಟ್ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಕ್ಯಾಚ್ಗಳನ್ನು ಹಿಡಿದಿರುವ ವಿಶ್ವ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. 301 ಟೆಸ್ಟ್ ಇನಿಂಗ್ಸ್ಗಳ ಮೂಲಕ ದ್ರಾವಿಡ್ ಒಟ್ಟು 210 ಕ್ಯಾಚ್ಗಳನ್ನು ಹಿಡಿದಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ. 270 ಇನಿಂಗ್ಸ್ಗಳಲ್ಲಿ ಜಯವರ್ಧನೆ ಒಟ್ಟು 205 ಕ್ಯಾಚ್ಗಳನ್ನು ಹಿಡಿದು ಈ ದಾಖಲೆ ಬರೆದಿದ್ದಾರೆ.
ಹಾಗೆಯೇ ಸೌತ್ ಆಫ್ರಿಕಾ ಪರ 315 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಜಾಕ್ಸ್ ಕಾಲಿಸ್ ಒಟ್ಟು 200 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಇದೀಗ ಕಾಲಿಸ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ಪರ 275 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಜೋ ರೂಟ್ 200 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಅಲ್ಲದೆ ಮುಂಬರುವ ಪಂದ್ಯಗಳ ಮೂಲಕ 11 ಕ್ಯಾಚ್ಗಳನ್ನು ಹಿಡಿದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವ ದಾಖಲೆ ಜೋ ರೂಟ್ ಪಾಲಾಗಲಿದೆ.