- Kannada News Photo gallery Cricket photos IPL 2025: Rohit Sharma On LSG's Radar Ahead Of IPL Auction
IPL 2025: LSG ತಂಡದ ಹಿಟ್ ಲಿಸ್ಟ್ನಲ್ಲಿ ರೋಹಿತ್ ಶರ್ಮಾ
IPL 2025 Rohit Sharma: ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಅವರನ್ನು ಕಳೆದ ಸೀಸನ್ನಲ್ಲಿ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಹೀಗಾಗಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಹೊರಬರಲಿದ್ದು, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
Updated on:Sep 01, 2024 | 12:31 PM

ಒಂದೆಡೆ ಐಪಿಎಲ್ ಮೆಗಾ ಹರಾಜಿನ ಸಿದ್ಧತೆಗಳು ಶುರುವಾಗಿದೆ. ಮತ್ತೊಂದೆಡೆ ರೋಹಿತ್ ಶರ್ಮಾ ಅವರ ಮುಂದಿನ ನಡೆಯೇನು? ಎಂಬ ಕುತೂಹಲ ಮುಂದುವರೆದಿದೆ. ಕೆಲ ಮೂಲಗಳ ಮಾಹಿತಿ ಪ್ರಕಾರ ಹಿಟ್ಮ್ಯಾನ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇತ್ತ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬರುವುದನ್ನು ಹಲವು ಫ್ರಾಂಚೈಸಿಗಳು ಎದುರು ನೋಡುತ್ತಿದೆ. ಈ ಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಹೆಸರು ಮುಂಚೂಣಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಲಕ್ನೋ ಸೂಪರ್ ಜೈಂಟ್ಸ್ ಹೊಸ ತಂಡವನ್ನು ರೂಪಿಸಲು ಬಯಸಿರುವುದು.

ಅಂದರೆ ಮುಂಬರುವ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಇದಾಗ್ಯೂ ಎಲ್ಎಸ್ಜಿ ತಂಡದ ಮುಂದಿನ ನಾಯಕ ಯಾರೆಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಜೊತೆ ರೋಹಿತ್ ಶರ್ಮಾ ಹೆಸರು ಕೂಡ ತಳುಕು ಹಾಕಿಕೊಂಡಿದೆ.

ರೋಹಿತ್ ಶರ್ಮಾ ಅವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ಅವರ ಖರೀದಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ 50 ಕೋಟಿ ರೂ. ಅನ್ನು ತೆಗೆದಿಡಲಿದ್ದಾರೆ ಎಂದು ವರದಿಯಾಗಿತ್ತು. ಈ ವರದಿಗಳ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ನೀಡಿದ ಹೇಳಿಕೆಯು ಇದೀಗ ಎಲ್ಲರ ಗಮನ ಸೆಳೆದಿದೆ.

ಎಎನ್ಐಗೆ ನೀಡಿದ ಸಂದರ್ಶನದಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ಜಾಂಟಿ ರೋಡ್ಸ್, ಹಿಟ್ಮ್ಯಾನ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಸಿದ್ಧವಾಗಿದೆ. ರೋಹಿತ್ ಶರ್ಮಾ ವಿಶ್ವದ ಶ್ರೇಷ್ಠ ಕ್ರಿಕೆಟಿಗ. ಅಂತಹ ಆಟಗಾರನ ಖರೀದಿಗೆ ಎಲ್ಎಸ್ಜಿ ಖಂಡಿತವಾಗಿಯೂ ಬಿಡ್ ಮಾಡಲಿದೆ ಎಂದು ಜಾಂಟಿ ರೋಡ್ಸ್ ಹೇಳಿದ್ದಾರೆ.

ಜಾಂಟಿ ರೋಡ್ಸ್ ಅವರ ಈ ಹೇಳಿಕೆಯೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹಿಟ್ ಲಿಸ್ಟ್ನಲ್ಲಿ ರೋಹಿತ್ ಶರ್ಮಾ ಅವರ ಹೆಸರು ಇರುವುದು ಖಚಿತವಾಗಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಹಿಟ್ಮ್ಯಾನ್ ಕಾಣಿಸಿಕೊಂಡರೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕನ ಖರೀದಿಗೆ LSG ಫ್ರಾಂಚೈಸಿ ಭರ್ಜರಿ ಪೈಪೋಟಿ ನಡೆಸುವುದಂತು ಖಚಿತ.

ಆದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ಕೂಡ ರೋಹಿತ್ ಶರ್ಮಾ ಅವರ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಹಿಟ್ಮ್ಯಾನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗೆ ಭಾರೀ ಪೈಪೋಟಿ ನಡೆಯುವುದಂತು ದಿಟ. ಈ ಪೈಪೋಟಿಯಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Published On - 12:30 pm, Sun, 1 September 24
