Joe Root: ತಪ್ಪಿದ ರೂಟ್… ರನ್ಗಿಂತ ಓವರೇ ಹೆಚ್ಚು..!
TV9 Web | Updated By: ಝಾಹಿರ್ ಯೂಸುಫ್
Updated on:
Feb 19, 2024 | 11:53 AM
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಸರಣಿಯ ಮೂರು ಪಂದ್ಯಗಳು ಮುಗಿದಿವೆ. ಈ ಮೂರು ಪಂದ್ಯಗಳಲ್ಲಿ ಜೋ ರೂಟ್ ಬ್ಯಾಟ್ಸ್ಮನ್ ಆಗಿ ವಿಫಲರಾಗಿದ್ದಾರೆ. ಆದರೆ ಅತ್ತ ನೂರಕ್ಕಿಂತ ಹೆಚ್ಚು ಓವರ್ಗಳನ್ನು ಎಸೆಯುವ ಮೂಲಕ ಪರಿಪೂರ್ಣ ಸ್ಪಿನ್ನರ್ ರೂಪದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
1 / 7
ಜೋ ರೂಟ್...ಟೆಸ್ಟ್ ಕ್ರಿಕೆಟ್ನ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರು. ಅದರಲ್ಲೂ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಜೋ ರೂಟ್ (Joe Root) ಈ ಸಾಧನೆ ಮಾಡಿದ್ದಾರೆ. ಆದರೀಗ ರೂಟ್ ಅವರ ರೂಟ್ ತಪ್ಪಿರುವುದು ಸ್ಪಷ್ಟ.
2 / 7
ಏಕೆಂದರೆ ಈ ಬಾರಿಯ ಟೆಸ್ಟ್ ಸರಣಿಯ 6 ಇನಿಂಗ್ಸ್ಗಳಿಂದ ಜೋ ರೂಟ್ ಕಲೆಹಾಕಿರುವುದು ಕೇವಲ 77 ರನ್ಗಳು ಮಾತ್ರ. ಇಂಗ್ಲೆಂಡ್ ತಂಡದ ಅತ್ಯಂತ ಅನುಭವಿ ಬ್ಯಾಟರ್ ಆಗಿರುವ ರೂಟ್ ಭಾರತೀಯ ಪಿಚ್ನಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಕ್ರೀಸ್ ಕಚ್ಚಿ ನಿಲ್ಲಲು ತಡಕಾಡುತ್ತಿದ್ದಾರೆ.
3 / 7
ಇತ್ತ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿರುವ ಜೋ ರೂಟ್ ಅತ್ತ ಬೌಲಿಂಗ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಅನುಪಸ್ಥಿತಿಯಲ್ಲಿ ಜೋ ರೂಟ್ ಕಳೆದ ಮೂರು ಪಂದ್ಯಗಳಲ್ಲಿ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂರು ಪಂದ್ಯಗಲ್ಲಿ ಅವರು ಎಸೆದಿರುವ ಒಟ್ಟು ಓವರ್ಗಳ ಸಂಖ್ಯೆ ಬರೋಬ್ಬರಿ 107.
4 / 7
ಅಂದರೆ ಟೀಮ್ ಇಂಡಿಯಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲಿ 642 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ಪಡೆದಿರುವುದು ಕೇವಲ 7 ವಿಕೆಟ್ಗಳನ್ನು ಮಾತ್ರ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ತಂಡದ ಪ್ರಮುಖ ಬ್ಯಾಟರ್ ಆಗಿರುವ ರೂಟ್ ಕಲೆಹಾಕಿರುವ ರನ್ಗಳಿಗಿಂತ ಹೆಚ್ಚು ಓವರ್ಗಳನ್ನು ಎಸೆದಿರುವುದು.
5 / 7
ವಿಶೇಷ ಎಂದರೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ ಇದುವರೆಗೆ 80 ಓವರ್ಗಳನ್ನು ಮಾತ್ರ ಎಸೆದಿದ್ದಾರೆ. ಅತ್ತ ಬ್ಯಾಟರ್ ಆಗಿರುವ ಜೋ ರೂಟ್ ಬರೋಬ್ಬರಿ 107 ಓವರ್ಗಳನ್ನು ಮಾಡಿದ್ದಾರೆ. ಅಂದರೆ ಇಲ್ಲಿ ಜೋ ರೂಟ್ ಬ್ಯಾಟಿಂಗ್ ಬದಲು ಬೌಲಿಂಗ್ನತ್ತ ವಾಲಿದ್ದಾರೆ. ಹೀಗಾಗಿಯೇ ಕಳಪೆ ಫಾರ್ಮ್ನಲ್ಲಿರುವ ಜೋ ರೂಟ್, ರೂಟ್ ತಪ್ಪಿದ್ದಾರೆ ಎಂಬುದು ಸ್ಪಷ್ಟ.
6 / 7
ಅಂದಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಇರುವುದು ಕೂಡ ಜೋ ರೂಟ್ ಹೆಸರಿನಲ್ಲಿ. ಟೀಮ್ ಇಂಡಿಯಾ ವಿರುದ್ಧ ಇದುವರೆಗೆ 28 ಟೆಸ್ಟ್ ಪಂದ್ಯಗಳನ್ನಾಡಿರುವ ರೂಟ್ 2603 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ದ್ವಿತೀಯ ಸ್ಥಾನದಲ್ಲಿದ್ದು, ಮಾಸ್ಟರ್ ಬ್ಲಾಸ್ಟರ್ ಇಂಗ್ಲೆಂಡ್ ವಿರುದ್ಧದ 32 ಟೆಸ್ಟ್ ಪಂದ್ಯಗಳಿಂದ 2535 ರನ್ ಕಲೆಹಾಕಿದ್ದರು.
7 / 7
ಇತ್ತ ಭಾರತದ ವಿರುದ್ಧ ಯಶಸ್ವಿ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರೂ ಈ ಬಾರಿ ಜೋ ರೂಟ್ ಬ್ಯಾಟಿಂಗ್ಗಿಂತ ಬೌಲಿಂಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಮೂರು ಪಂದ್ಯಗಳಲ್ಲಿ ಅವರು 107 ಓವರ್ಗಳನ್ನು ಎಸೆದಿರುವುದು.