- Kannada News Photo gallery Cricket photos IPL 2024: This Will Be Rohit Sharma’s final IPL for Mumbai Indians
Rohit Sharma: ಇದು ರೋಹಿತ್ ಶರ್ಮಾ ಅವರ ಕೊನೆಯ IPL?
IPL 2024: ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಕಳೆದ ಕೆಲ ಸೀಸನ್ಗಳಿಂದ ನಾಯಕರಾಗಿದ್ದ ರೋಹಿತ್ ಶರ್ಮಾ ಈ ಬಾರಿ ಕೇವಲ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಇದು ಮುಂಬೈ ಇಂಡಿಯನ್ಸ್ ಪರವಾಗಿ ಹಿಟ್ಮ್ಯಾನ್ ಅವರ ಕೊನೆಯ ಐಪಿಎಲ್ ಸೀಸನ್ ಆಗುವ ಸಾಧ್ಯತೆ ಹೆಚ್ಚಿದೆ.
Updated on: Feb 19, 2024 | 1:58 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 (IPL 2024) ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಮುಂಬೈ ತಂಡದ ನಾಯಕತ್ವದ ಬದಲಾವಣೆಯೊಂದಿಗೆ ಕಾಣಿಸಿಕೊಂಡ ಈ ಒಳಬೇಗುದಿ ಇನ್ನೂ ಸಹ ತಣ್ಣಗಾಗಿಲ್ಲ. ಅಲ್ಲದೆ ಇದು ತಣ್ಣಗಾಗುವ ಲಕ್ಷಣ ಕೂಡ ಇಲ್ಲ.

ಇದಕ್ಕೆ ಸಾಕ್ಷಿಯೇ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ನೀಡಿದ ಹೇಳಿಕೆಯಲ್ಲಿ ಹಲವು ತಪ್ಪುಗಳಿವೆ ಎಂದು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್‌ದೇಹ್ ಬಹಿರಂಗವಾಗಿಯೇ ಹೇಳಿರುವುದು. ಈ ಹೇಳಿಕೆ ಬೆನ್ನಲ್ಲೇ ಬೌಚರ್ ಅವರ ಸಂದರ್ಶನದ ವಿಡಿಯೋವನ್ನು ಸಹ ಡಿಲೀಟ್ ಮಾಡಲಾಗಿತ್ತು.

ಈ ವಿಷಯ ಅಲ್ಲಿಗೆ ಮುಗಿಯಿತು ಅನ್ನುವಷ್ಟರಲ್ಲೇ ಇದೀಗ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ. ಅದೇನೆಂದರೆ ರೋಹಿತ್ ಶರ್ಮಾ ಈ ಸಲ ಕೊನೆಯ ಬಾರಿಗೆ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂಬುದು. ಅಂದರೆ ಮುಂದಿನ ಸೀಸನ್ನಿಂದ ಹಿಟ್ಮ್ಯಾನ್ ಮುಂಬೈ ತಂಡದ ಭಾಗವಾಗಿರುವುದಿಲ್ಲ.

ಕೆಲ ಮೂಲಗಳ ಮಾಹಿತಿ ಪ್ರಕಾರ, ಮುಂಬೈ ಇಂಡಿಯನ್ಸ್ ಮುಂದಿನ ಐಪಿಎಲ್ನಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡುವುದು ಖಚಿತ. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಮುಂಬೈ ಫ್ರಾಂಚೈಸಿ ತಂಡದ ನಾಯಕನನ್ನು ಬದಲಿಸಿದೆ. ಅಂದರೆ ಇಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿರುವ ಉದ್ದೇಶ ರೋಹಿತ್ ಶರ್ಮ ಅವರನ್ನು ತಂಡದಿಂದ ಕೈ ಬಿಡುವುದಾಗಿದೆ.

ಏಕೆಂದರೆ ಐಪಿಎಲ್ 2025 ಕ್ಕಾಗಿ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿಗೂ ಮುನ್ನ ಕೇವಲ 4 ನಾಲ್ವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ಇರಲಿದೆ. ಇಲ್ಲಿ ಮೂವರು ಭಾರತೀಯ ಹಾಗೂ ಒಬ್ಬರು ವಿದೇಶಿ ಆಟಗಾರನನ್ನು ಮಾತ್ರ ತಂಡದಲ್ಲಿ ಉಳಿಸಿಕೊಳ್ಳಬಹುದು.

ಇತ್ತ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳಲು ಬಯಸುವ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಜಸ್‌ಪ್ರೀತ್ ಬುಮ್ರಾ ಹೆಸರುಗಳು ಮುಂಚೂಣಿಯಲ್ಲಿರಲಿದೆ. ಇನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಕೂಡ ರಿಟೈನ್ ಮಾಡಿಕೊಳ್ಳಲಿದ್ದಾರೆ. ನಾಲ್ಕನೇ ಆಯ್ಕೆಯ ಮೂಲಕ ವಿದೇಶಿ ಆಟಗಾರರೊಬ್ಬರನ್ನು ತಂಡದಲ್ಲೇ ಉಳಿಸಿಕೊಳ್ಳಲಿದ್ದಾರೆ.

ಇಲ್ಲಿ ಭಾರತೀಯರಾಗಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗೂ ಜಸ್‌ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ. ಇತ್ತ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬೀಳಲಿದ್ದಾರೆ. ಹೀಗಾಗಿಯೇ ಮೆಗಾ ಹರಾಜಿಗೂ ಒಂದು ವರ್ಷ ಮುಂಚಿತವಾಗಿ ರೋಹಿತ್ ಶರ್ಮಾ ಬದಲಿಗೆ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.

ಈ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮೆಗಾ ಹರಾಜಿಗಾಗಿ ಈಗಾಗಲೇ ಪ್ಲ್ಯಾನ್ ರೂಪಿಸಿದೆ. ಇದರೊಂದಿಗೆ ಮುಂಬೈ ತಂಡದಿಂದ ರೋಹಿತ್ ಶರ್ಮಾ ಕೂಡ ಹೊರಬರುವುದು ಖಚಿತವಾಗಿದೆ. ಅದರಂತೆ ಮುಂದಿನ ವರ್ಷ ಹಿಟ್ಮ್ಯಾನ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೆಗಾ ಆಕ್ಷನ್ನಲ್ಲಿ 37 ವರ್ಷದ ರೋಹಿತ್ ಶರ್ಮಾ ಅವರನ್ನು ಯಾವುದಾದರೂ ಫ್ರಾಂಚೈಸಿ ಖರೀದಿಸಿದರೆ ಮಾತ್ರ ಅವರು ಐಪಿಎಲ್ನಲ್ಲಿ ಮುಂದುವರೆಯಲಿದ್ದಾರೆ. ಇಲ್ಲದಿದ್ದರೆ ಈ ಬಾರಿಯ ಐಪಿಎಲ್ ಹಿಟ್ಮ್ಯಾನ್ ಪಾಲಿಗೆ ಕೊನೆಯ ಐಪಿಎಲ್ ಟೂರ್ನಿ ಆಗಿ ಉಳಿಯಲಿದೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್‌ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್.
