ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 (WPL 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 23 ರಿಂದ ಶುರುವಾಗಲಿರುವ ಮಹಿಳಾ ಟಿ20 ಲೀಗ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಕಳೆದ ಬಾರಿಯಂತೆ ಈ ಸಲ ಕೂಡ ಆರ್ಸಿಬಿ ಕೆಂಪು-ಕಪ್ಪು ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಅಲ್ಲದೆ ನೂತನ ಜೆರ್ಸಿಯ ವಿನ್ಯಾಸದಲ್ಲೂ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ. ಅಂದರೆ ಕಳೆದ ಸೀಸನ್ನಲ್ಲಿ ಕಾಣಿಸಿಕೊಂಡಿದ್ದ ಅದೇ ವಿನ್ಯಾಸದ ಸಮವಸ್ತ್ರದಲ್ಲಿ ಆರ್ಸಿಬಿ ವನಿತೆಯರು ಈ ಬಾರಿ ಕಣಕ್ಕಿಳಿಯಲಿದ್ದಾರೆ.
ಈ ಬಾರಿಯ WPL ಟೂರ್ನಿಯು ಫೆಬ್ರವರಿ 23 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಫೆಬ್ರವರಿ 24 ರಂದು ಯುಪಿ ವಾರಿಯರ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್ಸಿಬಿ WPL ಅಭಿಯಾನ ಆರಂಭಿಸಲಿದೆ.
ವಿಶೇಷ ಎಂದರೆ ಈ ಬಾರಿಯ ಟೂರ್ನಿಯು ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಅಂದರೆ ಟೂರ್ನಿಯ ಮೊದಲಾರ್ಧವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ದ್ವಿತೀಯಾರ್ಧದ ಪಂದ್ಯಗಳಿಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಪ್ಲೇಆಫ್ಸ್ ಮತ್ತು ಫೈನಲ್ ಪಂದ್ಯಗಳು ಕೂಡ ದೆಹಲಿಯಲ್ಲೇ ನಡೆಯಲಿದೆ.
ಮೊದಲಾರ್ಧದ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನ ಅಭಿಮಾನಿಗಳ ಭರಪೂರ ಬೆಂಬಲ ಸಿಗಲಿದೆ. ಇದು ಆರ್ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದ್ದು, ಇದರಿಂದಾಗಿ ಈ ಬಾರಿ ರಾಯಲ್ ಗರ್ಲ್ಸ್ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಸ್ಮೃತಿ ಮಂಧಾನ (ನಾಯಕಿ), ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ*, ಹೀದರ್ ನೈಟ್*, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್*, ಜಾರ್ಜಿಯಾ ವೇರ್ಹ್ಯಾಮ್*, ಏಕ್ತಾ ಬಿಶ್ತ್, ಕೇಟ್ ಕ್ರಾಸ್*, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನಕ್ಸ್*.
ವುಮೆನ್ಸ್ ಪ್ರೀಮಿಯರ್ ಲೀಗ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಜೆರ್ಸಿಯಲ್ಲಿ ಫೋಟೋಗೆ ಫೋಸ್ಟ್ ನೀಡಿದ ನಾಯಕಿ ಸ್ಮೃತಿ ಮಂಧಾನ.
Published On - 3:08 pm, Mon, 19 February 24