
ಹೈದರಾಬಾದ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ (Joe Root) ಒಟ್ಟು 31 ರನ್ ಬಾರಿಸಿದ್ದಾರೆ. ಈ ಮೂವತ್ತೊಂದು ರನ್ಗಳೊಂದಿಗೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 29 ರನ್ ಬಾರಿಸಿದ್ದ ಜೋ ರೂಟ್, ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ರನ್ಗಳ ಮೂಲಕ ಭಾರತದ ವಿರುದ್ಧದ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ರೂಟ್ ಅಗ್ರಸ್ಥಾನಕ್ಕೇರಿದರು.

ಇದಕ್ಕೂ ಮುನ್ನ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಭಾರತದ ವಿರುದ್ಧ 51 ಇನಿಂಗ್ಸ್ ಆಡಿದ್ದ ಪಾಂಟಿಂಗ್ ಒಟ್ಟು 2555 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ರೂಟ್ ಪಾಲಾಗಿದೆ.

ಟೀಮ್ ಇಂಡಿಯಾ ವಿರುದ್ಧ 47 ಟೆಸ್ಟ್ ಇನಿಂಗ್ಸ್ ಆಡಿರುವ ಜೋ ರೂಟ್ ಇದೀಗ 2557 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಇದೇ ಪಂದ್ಯದ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲೇ 4 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ. ರೂಟ್ ಅವರನ್ನು ಹೊರತುಪಡಿಸಿ WTC ನಲ್ಲಿ ಯಾವುದೇ ಬ್ಯಾಟರ್ 4000 ರನ್ ಕಲೆಹಾಕಿಲ್ಲ.

ಹಾಗೆಯೇ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ರೂಟ್ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

ಇಂಗ್ಲೆಂಡ್ ವಿರುದ್ಧ 32 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 7 ಶತಕಗಳೊಂದಿಗೆ 2535 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಕೂಡ ಜೋ ರೂಟ್ ಅಳಿಸಿ ಹಾಕಿದ್ದಾರೆ.

ಭಾರತದ ವಿರುದ್ಧ 27 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 9 ಭರ್ಜರಿ ಶತಕಗಳೊಂದಿಗೆ 2557 ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಡೊ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೂ ಜೋ ರೂಟ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.