ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ (Kagiso Rabada) 5 ವಿಕೆಟ್ ಕಬಳಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಸೌತ್ ಆಫ್ರಿಕಾ ಪರ ರಬಾಡ ಕರಾರುವಾಕ್ ದಾಳಿ ಸಂಘಟಿಸಿದ್ದರು.
ರಬಾಡ ಅವರ ಮಿಂಚಿನ ದಾಳಿಯಿಂದಾಗಿ ಟೀಮ್ ಇಂಡಿಯಾದ ಅಗ್ರಗಣ್ಯ ಬ್ಯಾಟರ್ಗಳಾದ ರೋಹಿತ್ ಶರ್ಮಾ (5), ಶ್ರೇಯಸ್ ಅಯ್ಯರ್ (31), ವಿರಾಟ್ ಕೊಹ್ಲಿ (38) ಬೇಗನೆ ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಅಶ್ವಿನ್ (8) ಹಾಗೂ ಶಾರ್ದೂಲ್ ಠಾಕೂರ್ (24) ವಿಕೆಟ್ ಪಡೆಯುವ ಮೂಲಕ ರಬಾಡ 5 ವಿಕೆಟ್ಗಳ ಸಾಧನೆ ಮಾಡಿದರು.
ಕೇವಲ 44 ರನ್ ನೀಡಿ 5 ವಿಕೆಟ್ ಕಬಳಿಸುವುದರೊಂದಿಗೆ ಕಗಿಸೊ ರಬಾಡ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ 7ನೇ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಶಾನ್ ಪೊಲ್ಲಾಕ್ (823), ಡೇಲ್ ಸ್ಟೇನ್ (697), ಮಖಾಯಾ ಎನ್ಟಿನಿ (661), ಅಲನ್ ಡೊನಾಲ್ಡ್ (602), ಜಾಕ್ವೆಸ್ ಕಾಲಿಸ್ (572), ಮತ್ತು ಮೊರ್ನೆ ಮೊರ್ಕೆಲ್ (535) ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ 28 ವರ್ಷದ ಕಗಿಸೊ ರಬಾಡ.
2015 ರಲ್ಲಿ ಸೌತ್ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ್ದ ರಬಾಡ 61 ಟೆಸ್ಟ್ ಪಂದ್ಯಗಳಿಂದ 285 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 101 ಏಕದಿನ ಪಂದ್ಯಗಳಿಂದ 157 ವಿಕೆಟ್, 56 ಟಿ20 ಪಂದ್ಯಗಳಿಂದ 58 ವಿಕೆಟ್ ಕಬಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 500+ ವಿಕೆಟ್ ಪಡೆದಿರುವ ಬೌಲರ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇನ್ನು ಕಗಿಸೊ ರಬಾಡ ಅವರ ಈ ಮಿಂಚಿನ ದಾಳಿಯ ಪರಿಣಾಮ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ 8 ವಿಕೆಟ್ ಕಳೆದುಕೊಂಡು 208 ರನ್ಗಳಿಸಲಷ್ಟೇ ಶಕ್ತವಾಗಿದೆ. ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ (70) ಹಾಗೂ ಮೊಹಮ್ಮದ್ ಸಿರಾಜ್ (0) ಇದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.