
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಟ್ರೆಂಡಿಂಗ್ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಮೊದಲ ಎಸೆತಕ್ಕೆ ಔಟಾಗಿ ಗೋಲ್ಡನ್ ಡಕ್ ಪಟ್ಟ ಕಟ್ಟಿಕೊಂಡ ಸೂರ್ಯ ಭಾರೀ ಸುದ್ದಿಯಲ್ಲಿದ್ದಾರೆ. ಜೊತೆಗೆ ಸೂರ್ಯ ಜಾಗದಲ್ಲಿ ಸ್ಯಾಮ್ಸನ್ಗೆ ಅವಕಾಶ ನೀಡಬೇಕಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಟಿ20 ಕ್ರಿಕೆಟ್ನ ನಂಬರ್ ಬ್ಯಾಟರ್ ಸೂರ್ಯ ಏಕದಿನ ಕ್ರಿಕೆಟ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿರುವುದು ಇದಕ್ಕೆಲ್ಲ ಕಾರಣ. ಕೆಲ ಕ್ರಿಕೆಟ್ ಪಂಡಿತರು ಕೂಡ ಸೂರ್ಯನ ಆಟದಿಂದ ಬೇಸರಗೊಂಡು ಅವಕಾಶ ವಂಚಿತರಾಗಿರುವ ಸಂಜು ಸ್ಯಾಮ್ಸನ್ ಪರ ನಿಂತಿದ್ದಾರೆ.

ಹೀಗಿರುವಾಗ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸಂಜು ಸ್ಯಾಮ್ಸನ್ vs ಸೂರ್ಯಕುಮಾರ್ ನಡುವಣ ಕಾಳಗಕ್ಕೆ ತಕ್ಕ ಉತ್ತರ ನೀಡಿದ್ದಾರೆ.

ಇದು ಮುಗಿಯದ ಡಿಬೆಟ್. ಯಾವ ಆಟಗಾರ ಚೆನ್ನಾಗಿ ಆಡುತ್ತಾನೊ ಅವನು ಹೆಚ್ಚಿನ ಅವಕಾಶ ಪಡೆಯುತ್ತಾನೆ. ಸೂರ್ಯ ಮತ್ತು ಸಂಜು ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಈಗ ಸಂಜು ಎಲ್ಲಾದರು ಕಳಪೆ ಪ್ರದರ್ಶನ ತೋರಿದ್ದರೆ ಇಬ್ಬೊಬ್ಬನಿಗೆ ಅವಕಾಶ ನೀಡಬೇಕಿತ್ತು ಎಂಬ ಮಾತು ಬರುತ್ತದೆ. ಈರೀತಿ ಆಗಬಾರದು ಎಂದು ಕಪಿಲ್ ದೇವ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರಿಗೆ ಎಷ್ಟು ಅವಕಾಶ ನೀಡಬೇಕು ಎಂಬುದನ್ನು ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರ ಮಾಡುತ್ತದೆ. ಜನರು ಮಾತನಾಡುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದೇನೇ ಇದ್ದರು ಅಂತಿಮವಾಗಿ ಮ್ಯಾನೇಜ್ಮೆಂಟ್ ನಿರ್ಧಾರ ಕೈಗೊಳ್ಳುತ್ತದೆ - ಕಪಿಲ್ ದೇವ್.

ಪಂದ್ಯ ಮುಗಿದ ಬಳಿಕ ಒಬ್ಬ ಆಟಗಾರನ ಬಗ್ಗೆ ಮಾತನಾಡುವುದು ತುಂಬಾ ಸುಲಭ. ಬ್ಯಾಟಿಂಗ್ ಆರ್ಡರ್ನಲ್ಲಿ ಬದಲಾವಣೆ ಮಾಡುವುದು ಹೊಸದೇನು ಅಲ್ಲ. ಆ ಬ್ಯಾಟರ್ಗೆ ಆತ್ಮವಿಶ್ವಾಸ ಇರಬೇಕಷ್ಟೆ. ಇಲ್ಲವಾದಲ್ಲಿ ನಾಯಕನಾಗಿ ಹೇಳಿ ಚರ್ಚಿಸಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

ಏಕದಿನ ಕ್ರಿಕೆಟ್ನಲ್ಲಿ ಸತತ ಮೂರು ಬಾರಿ ಗೋಲ್ಡನ್ ಡಕ್ಗೆ ಔಟಾದ ಮೊದಲ ಬ್ಯಾಟರ್ ಎಂಬ ಬೇಡದ ದಾಖಲೆಯೊಂದು ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಏಕದಿನ ಕ್ರಿಕೆಟ್ನಲ್ಲಿ 21 ಇನಿಂಗ್ಸ್ ಆಡಿದರೂ ಸೂರ್ಯಕುಮಾರ್ ಯಾದವ್ 25.47 ಸರಾಸರಿಯಲ್ಲಿ ಕೇವಲ 433 ರನ್ ಕಲೆಹಾಕಿದ್ದಾರಷ್ಟೆ.