ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ 233 ರನ್ಗಳ ವಿಜಯ ಸಾಧಿಸಿದ್ದ ಸೌತ್ ಆಫ್ರಿಕಾ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 109 ರನ್ಗಳ ಜಯಭೇರಿ ಬಾರಿಸಿದೆ. ಈ ಸರಣಿ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇನ್ನು ಸೌತ್ ಆಫ್ರಿಕಾ ಪಾಲಿಗೆ ನಿರ್ಣಾಯಕವಾಗಿದ್ದ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿ ಕೇಶವ್ ಮಹಾರಾಜ್. ದ್ವಿತೀಯ ಇನಿಂಗ್ಸ್ನಲ್ಲಿ 347 ರನ್ಗಳ ಗುರಿ ಪಡೆದ ಶ್ರೀಲಂಕಾ ತಂಡವು 200 ರನ್ಗಳವರೆಗೆ ಕಳೆದುಕೊಂಡಿದ್ದು ಕೇವಲ 5 ವಿಕೆಟ್ಗಳು ಮಾತ್ರ. ಹೀಗಾಗಿ ಲಂಕಾ ಪಡೆ ಈ ಪಂದ್ಯವನ್ನು ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಸ್ಪಿನ್ ಮೋಡಿ ತೋರಿಸಿದ ಕೇಶವ್ ಮಹಾರಾಜ್ ಶ್ರೀಲಂಕಾ ಬ್ಯಾಟರ್ಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದರು. ಅದರಲ್ಲೂ ಕೊನೆಯ ದಿನದಾಟದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಕೇಶವ್ 25 ಓವರ್ಗಳನ್ನು ಎಸೆದು 5 ವಿಕೆಟ್ ಕಬಳಿಸಿದರು. ಈ ಮೂಲಕ ಲಂಕಾ ತಂಡವನ್ನು 238 ರನ್ಗಳಿಗೆ ಆಲೌಟ್ ಮಾಡಿ ಸೌತ್ ಆಫ್ರಿಕಾ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು.
ಈ ಅಮೋಘ ಗೆಲುವಿನ ಬಳಿಕ ಕೇಶವ್ ಮಹಾರಾಜ್ ದೇವರನ್ನು ಸ್ಮರಿಸಲು ಮರೆಯಲಿಲ್ಲ. 2-0 ಅಂತರದಿಂದ ಸರಣಿ ಗೆದ್ದ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೇಶವ್, ಜೈ ಶ್ರೀರಾಮ್, ಜೈ ಹನುಮಾನ್ ಹ್ಯಾಷ್ ಟ್ಯಾಗ್ ಬಳಸುವ ಮೂಲಕ ಧನ್ಯತೆಯನ್ನು ಅರ್ಪಿಸಿದರು.
ಅಂದಹಾಗೆ ಕೇಶವ್ ಮಹಾರಾಜ್ ಭಗವಾನ್ ಶ್ರೀರಾಮನನ್ನು ಸ್ಮರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪಣಾ ದಿನದಂದು ಕೇಶವ್ ಮಹಾರಾಜ್ ಶುಭ ಹಾರೈಸಿದ್ದರು. ಅಲ್ಲದೆ ಆ ಬಳಿಕ ಅಯೋಧ್ಯೆಗೆ ಭೇಟಿ ಸಹ ನೀಡಿದ್ದರು.
ಮೂಲತಃ ಉತ್ತರ ಪ್ರದೇಶದವರಾಗಿರುವ ಕೇಶವ್ ಮಹಾರಾಜ್ ಪೂರ್ವಜರು ಕಳೆದ 1 ಶತಮಾನಗಳಿಂದ ಸೌತ್ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಇದಾಗ್ಯೂ ಕೇಶವ್ ಮಹಾರಾಜ್ ಕುಟಂಬಸ್ಥರು ಹಿಂದೂ ಸಂಪ್ರದಾಯಗಳನ್ನು ಹಾಗೆ ಮುಂದುವರೆಸಿದ್ದಾರೆ. ಇದಕ್ಕೆ ಸಾಕ್ಷಿ ಗೆಲುವಿನ ಸಂಭ್ರಮದ ನಡುವೆಯೂ ಸೌತ್ ಆಫ್ರಿಕಾ ಕ್ರಿಕೆಟಿಗ ದೇವರನ್ನು ಸ್ಮರಿಸಿರುವುದು.