
ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಿಂದಲೂ ಕೆಎಲ್ ರಾಹುಲ್ (KL Rahul) ಹೊರಗುಳಿದಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಾಹುಲ್ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ 2ನೇ ಮತ್ತು 3ನೇ ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು.

ಇದಾಗ್ಯೂ ಕೆಎಲ್ ರಾಹುಲ್ ರಾಂಚಿ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಎನ್ಸಿಎನಲ್ಲಿರುವ ರಾಹುಲ್ ಶೇ.90 ರಷ್ಟು ಫಿಟ್ನೆಸ್ ಸಾಧಿಸಿದ್ದಾರೆ. ಇದಾಗ್ಯೂ ಸಂಪೂರ್ಣ ಫಿಟ್ನೆಸ್ ಹೊಂದದೇ ಕಣಕ್ಕಿಳಿದು ರಿಸ್ಕ್ ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಇನ್ನು ಧರ್ಮಶಾಲಾದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯರಿರಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮಾರ್ಚ್ 7 ರಿಂದ ಶುರುವಾಗುವ ಅಂತಿಮ ಪಂದ್ಯದ ವೇಳೆ ಅವರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಇತ್ತ ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿಯುತ್ತಿರುವ ಕಾರಣ ಕರ್ನಾಟಕದ ಮತ್ತೋರ್ವ ಆಟಗಾರ ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾದಲ್ಲೇ ಉಳಿಯಲಿದ್ದಾರೆ. ಅಂದರೆ 3ನೇ ಟೆಸ್ಟ್ಗೆ ಕೆಎಲ್ಆರ್ ಅಲಭ್ಯರಾಗಿದ್ದ ಕಾರಣ ಬದಲಿ ಆಟಗಾರನಾಗಿ ಪಡಿಕ್ಕಲ್ ಆಯ್ಕೆಯಾಗಿದ್ದರು.

ಇದೀಗ ನಾಲ್ಕನೇ ಪಂದ್ಯದಿಂದಲೂ ಕೆಎಲ್ ರಾಹುಲ್ ಹಿಂದೆ ಸರಿದಿರುವ ಕಾರಣ ದೇವದತ್ ಪಡಿಕ್ಕಲ್ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಜತ್ ಪಾಟಿದಾರ್ ಸಂಪೂರ್ಣ ವಿಫಲರಾಗಿದ್ದಾರೆ.

ಹೀಗಾಗಿ ನಾಲ್ಕನೇ ಪಂದ್ಯದಿಂದ ರಜತ್ ಪಾಟಿದಾರ್ ಅವರನ್ನು ಕೈ ಬಿಡುವ ಸಾಧ್ಯತೆಯಿದ್ದು, ಅವರ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ಗೆ ಚೊಚ್ಚಲ ಅವಕಾಶ ಸಿಗುವ ನಿರೀಕ್ಷೆಯಿದೆ. ಅದರಂತೆ ರಾಂಚಿ ಟೆಸ್ಟ್ ಪಂದ್ಯದ ಮೂಲಕ DDP ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್, ಜಸ್ಪ್ರೀತ್ ಬುಮ್ರಾ.