
2026 ರ ಟಿ 20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯನ್ನು ಭಾರತ ಮತ್ತು ಶ್ರೀಲಂಕಾ ಆಯೋಜಿಸಲಿದ್ದು, ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಏತನ್ಮಧ್ಯೆ, ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಅವರಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಆದಾಗ್ಯೂ, ಅವರ ಈ ಅಧಿಕಾರಾವಧಿ ಕೇವಲ 21 ದಿನಗಳವರೆಗೆ ಮಾತ್ರ ಇರಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಅವರನ್ನು ರಾಷ್ಟ್ರೀಯ ತಂಡದ ವೇಗದ ಬೌಲಿಂಗ್ ಸಲಹೆಗಾರರನ್ನಾಗಿ ನೇಮಿಸಿದೆ. ಈ ನೇಮಕಾತಿ ಡಿಸೆಂಬರ್ 15, 2025 ರಿಂದ ಜನವರಿ 25, 2026 ರವರೆಗೆ ಸೀಮಿತ ಅವಧಿಗೆ ಇರುತ್ತದೆ. ಫೆಬ್ರವರಿಯಲ್ಲಿ ಪ್ರಾರಂಭವಾಗುವ ಟಿ20 ವಿಶ್ವಕಪ್‌ಗೆ ತಂಡದ ವೇಗದ ಬೌಲರ್‌ಗಳನ್ನು ಸಿದ್ಧಪಡಿಸುವುದು ಮಾಲಿಂಗ ಅವರ ಪಾತ್ರ.

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಾಲಿಂಗ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರ ಅದ್ಭುತ ಪ್ರದರ್ಶನ ನೀಡಿದ್ದ ಮಾಲಿಂಗ ತಮ್ಮ ತಂಡವನ್ನು ಇಲ್ಲಿಯವರೆಗಿನ ಏಕೈಕ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ್ದರು.

ಮುಂಬರುವ ವಿಶ್ವಕಪ್‌ಗೆ ಶ್ರೀಲಂಕಾದ ಸಿದ್ಧತೆಗಳನ್ನು ಬಲಪಡಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮಾಲಿಂಗ ಅವರ ಅಪಾರ ಅಂತರರಾಷ್ಟ್ರೀಯ ಅನುಭವ ಮತ್ತು ಡೆತ್ ಬೌಲಿಂಗ್‌ನಲ್ಲಿನ ಪ್ರಸಿದ್ಧ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2004 ರಲ್ಲಿ ಶ್ರೀಲಂಕಾ ತಂಡಕ್ಕೆ ಪಾದಾರ್ಪಣೆ ಮಾಡಿದ ಮಾಲಿಂಗ, ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಅವಧಿಯಲ್ಲಿ ಆಡಿದ 30 ಟೆಸ್ಟ್ ಪಂದ್ಯಗಳಲ್ಲಿ 101 ವಿಕೆಟ್‌ಗಳನ್ನು ಹಾಗೆಯೇ 338 ಏಕದಿನ ವಿಕೆಟ್‌ಗಳನ್ನು ಮತ್ತು 107 ಟಿ20 ವಿಕೆಟ್‌ಗಳನ್ನು ಕಬಳಿಸಿದ್ದರು. ಇದಲ್ಲದೆ 127 ಐಪಿಎಲ್ ಪಂದ್ಯಗಳನ್ನಾಡಿರುವ ಮಾಲಿಂಗ 179 ವಿಕೆಟ್‌ಗಳನ್ನು ಕಬಳಿಸಿದ್ದರು.