
2025 ರ ಮಹಿಳಾ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ಪರ ತಂಡದ ನಾಯಕಿ ಲಾರಾ ವೋಲ್ವಾರ್ಡ್ ಐತಿಹಾಸಿಕ ಇನ್ನಿಂಗ್ಸ್ ಆಡಿ ಶತಕ ಸಿಡಿಸಿ ಮಿಂಚಿದ್ದಾರೆ. ಲಾರಾ ಅವರ ಈ ಸ್ಫೋಟಕ ಇನ್ನಿಂಗ್ಸ್ನ ಆಧಾರದ ಮೇಲೆ ಆಫ್ರಿಕಾ ತಂಡ 319 ರನ್ ಕಲೆಹಾಕಿದೆ.

ಈ ಪಂದ್ಯದ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡ ಲಾರಾ ವೋಲ್ವಾರ್ಡ್, ಬಹುತೇಕ ಎಲ್ಲಾ ಬೌಲರ್‌ಗಳ ವಿರುದ್ಧ ರನ್ ಗಳಿಸಿದರು ಮತ್ತು 115 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಇದು ಅವರ ಏಕದಿನ ವೃತ್ತಿಜೀವನದ 10 ನೇ ಶತಕವಾಗಿದ್ದು, ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಅವರ ಮೊದಲ ಶತಕವಾಗಿದೆ.

ಈ ಶತಕದೊಂದಿಗೆ ಲಾರಾ ವೋಲ್ವಾರ್ಡ್ ಮಹಿಳಾ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ ಮೊದಲ ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ . ಈ ಪಂದ್ಯದಲ್ಲಿ ಅವರು ಒಟ್ಟು 143 ಎಸೆತಗಳನ್ನು ಎದುರಿಸಿ 20 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳ ಸಹಿತ 169 ರನ್ ಬಾರಿಸಿದರು.

ಹಾಗೆಯೇ ಲಾರಾ ವೋಲ್ವಾರ್ಡ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 5,000 ರನ್ಗಳನ್ನು ಪೂರೈಸುವ ಮೂಲಕ . ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 5,000 ರನ್ ಗಳಿಸಿದ ಆರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಈ ಮೈಲಿಗಲ್ಲು ತಲುಪಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ್ತಿ ಎನಿಸಿಕೊಂಡರು. ಇದಲ್ಲದೆ, ಮಹಿಳಾ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 450 ರನ್ ಗಳಿಸಿದ ಮೊದಲ ನಾಯಕಿ ಎಂಬ ದಾಖಲೆಯನ್ನು ಬರೆದರು.

ಈ ಪಂದ್ಯದಲ್ಲಿ 50+ ರನ್ ಗಳಿಸುವ ಮೂಲಕ ಲಾರಾ ವೋಲ್ವಾರ್ಡ್ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದು, ಆರಂಭಿಮ ಆಟಗಾರ್ತಿಯಾಗಿ ಹೆಚ್ಚು ಬಾರಿ 50+ ಸ್ಕೋರ್ ದಾಖಲಿಸಿದವರ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಅವರನ್ನು ಸರಿಗಟ್ಟಿದ್ದಾರೆ. ಲಾರಾ ವೋಲ್ವಾರ್ಡ್ ಇದುವರೆಗೆ ಏಕದಿನದಲ್ಲಿ 48 ಬಾರಿ 50+ ರನ್ ದಾಖಲಿಸಿದರೆ, ಸ್ಮೃತಿ ಮಂಧಾನ ಕೂಡ 48 ಬಾರಿ ಈ ಸಾಧನೆ ಮಾಡಿದ್ದಾರೆ.