Updated on: Oct 19, 2022 | 1:07 PM
8ನೇ ಆವೃತ್ತಿಯ ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನಲ್ಲೇ ದಾಖಲೆ ಸೃಷ್ಟಿಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಈ ಸೀಸನ್ನ ಮೊದಲ ಹ್ಯಾಟ್ರಿಕ್ ಪಡೆದು ದಾಖಲೆ ಬರೆದಿದ್ದಾರೆ. ಕಾರ್ತಿಕ್, ರಾಜಪಕ್ಸೆ, ಅಸಲಂಕಾ ಮತ್ತು ಶನಕ ಅವರನ್ನು ಸತತ ಮೂರು ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಮೆಯ್ಯಪ್ಪನ್ ಅಂತರಾಷ್ಟ್ರೀಯ ಟಿ20ಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಯುಎಇ ಬೌಲರ್ ಆಗಿದ್ದು, ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಐದನೇ ಬೌಲರ್ ಆಗಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ದಾಖಲೆ ಆಸೀಸ್ ವೇಗಿ ಬ್ರೆಟ್ ಲೀ ಹೆಸರಿನಲ್ಲಿದೆ. ಬ್ರೆಟ್ ಲೀ 2007 ರಲ್ಲಿ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ್ದರು.
ಲೀ ನಂತರ, 14 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಮುಂದಿನ ಹ್ಯಾಟ್ರಿಕ್ ಬಂದಿತ್ತು. 2021 ರ ಟಿ 20 ವಿಶ್ವಕಪ್‌ನಲ್ಲಿ, ಐರ್ಲೆಂಡ್‌ನ ವೇಗದ ಬೌಲರ್ ಕರ್ಟಿಸ್ ಕ್ಯಾಂಪ್‌ಫರ್, ನೆದರ್‌ಲ್ಯಾಂಡ್ಸ್ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು.
ಶ್ರೀಲಂಕಾದ ಲೆಗ್ ಸ್ಪಿನ್ನರ್ ವನೆಂದು ಹಸರಂಗ ಕೂಡ 2021 ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಸರಂಗ ಈ ಸಾಧನೆ ಮಾಡಿದ್ದು, ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದಾದ ಬಳಿಕ 2021ರ ಟಿ20 ವಿಶ್ವಕಪ್‌ನಲ್ಲಿ ಕಗಿಸೊ ರಬಾಡ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಬಾಡ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದು, ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ದಕ್ಷಿಣ ಆಫ್ರಿಕಾದ ಬೌಲರ್ ಎನಿಸಿಕೊಂಡಿದ್ದರು.