ಲಂಕಾ ಪ್ರೀಮಿಯರ್ ಲೀಗ್ನಲ್ಲಿ (LPL 2024) ಸ್ಪೋಟಕ ಶತಕ ಬಾರಿಸಿದ ಕುಸಾಲ್ ಪೆರೇರಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಬಾಬರ್ ಆಝಂ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ದಂಬುಲ್ಲಾ ಸಿಕ್ಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಾಫ್ನಾ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ದಂಬುಲ್ಲಾ ಸಿಕ್ಸರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಕುಸಾಲ್ ಪೆರೇರಾ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಪೆರೇರಾ ಜಾಫ್ನಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 50 ಎಸೆತಗಳಲ್ಲಿ ಶತಕ ಮೂಡಿಬಂತು. ಇದರೊಂದಿಗೆ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಕುಸಾಲ್ ಪೆರೇರಾ ಪಾಲಾಯಿತು.
ಇದಕ್ಕೂ ಮುನ್ನ ಈ ದಾಖಲೆ ಬಾಬರ್ ಆಝಂ ಹೆಸರಿನಲ್ಲಿತ್ತು. 2023 ರ ಎಲ್ಪಿಎಲ್ನಲ್ಲಿ ಕೊಲಂಬೊ ಸ್ಟ್ರಕರ್ಸ್ ಪರ ಕಣಕ್ಕಿಳಿದಿದ್ದ ಬಾಬರ್ 57 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಕುಸಾಲ್ ಪೆರೇರಾ ಮುರಿದಿದ್ದಾರೆ.
ಇನ್ನು ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ ಕುಸಾಲ್ ಪೆರೇರಾ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 102 ರನ್ ಬಾರಿಸಿದರು. ಈ ಶತಕದ ನೆರವಿನಿಂದ ದಂಬುಲ್ಲಾ ಸಿಕ್ಸರ್ಸ್ ತಂಡವು 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿತು.
192 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಜಾಫ್ನಾ ಕಿಂಗ್ಸ್ ಪರ ಅವಿಷ್ಕಾ ಫೆರ್ನಾಂಡೋ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅವಿಷ್ಕಾ 34 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 80 ರನ್ ಚಚ್ಚಿದರೆ, ಚರಿತ್ ಅಸಲಂಕಾ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಜಾಫ್ನಾ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು.