11 ಎಸೆತಗಳಲ್ಲಿ 63 ರನ್: ಸಿಡಿಲಬ್ಬರದ ಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್
Martin Guptill Records: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವೇಗದ ಶತಕ ಸಿಡಿಸುವ ಮೂಲಕ ನ್ಯೂಝಿಲೆಂಡ್ ಕ್ರಿಕೆಟರ್ ಮಾರ್ಟಿನ್ ಗಪ್ಟಿಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಒಂದೇ ಓವರ್ನಲ್ಲಿ 34 ರನ್ ಚಚ್ಚಿ ಹೊಸ ಇತಿಹಾಸ ಬರೆದಿದ್ದಾರೆ. ಇದರ ಜೊತೆಗೆ 10+ ಸಿಕ್ಸ್ ಸಿಡಿಸಿದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
1 / 6
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ 12ನೇ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಸೂರತ್ನ ಲಾಲ್ಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೋನಾರ್ಕ್ ಸೂರ್ಯಸ್ ಒಡಿಶಾ ಮತ್ತು ಸದರ್ನ್ ಸೂಪರ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಸರ್ದನ್ ಸೂಪರ್ ಸ್ಟಾರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.
2 / 6
ಅದರಂತೆ ಇನಿಂಗ್ಸ್ ಆರಂಭಿಸಿದ ಕೋನಾರ್ಕ್ ಸೂರ್ಯಸ್ ಒಡಿಶಾ ಪರ ಆರಂಭಿಕ ಆಟಗಾರ ರಿಚರ್ಡ್ ಲೆವಿ 21 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 63 ರನ್ ಚಚ್ಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ 33 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಕೋನಾರ್ಕ್ ಸೂರ್ಯಸ್ ಒಡಿಶಾ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.
3 / 6
ಈ ಕಠಿಣ ಗುರಿಯನ್ನು ಬೆನ್ನತ್ತಿದ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶ್ರೀವಾತ್ಸವ್ ಗೋಸ್ವಾಮಿ ಕೇವಲ 18 ರನ್ಗಳಿಸಿ ಔಟಾಗಿದ್ದರು. ಈ ಆರಂಭಿಕ ಆಘಾತದ ಹೊರತಾಗಿಯೂ ಮತ್ತೊಂದು ತುದಿಯಲ್ಲಿದ್ದ ಮಾರ್ಟಿನ್ ಗಪ್ಟಿಲ್ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದರು.
4 / 6
ಅದರಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಟಿನ್ ಗಪ್ಟಿಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್ ಫೋರ್ಗಳ ಸುರಿಮಳೆಗೈಯ್ದರು. ಅದರಲ್ಲೂ ನವಿನ್ ಸ್ಟಿವರ್ಟ್ ಎಸೆದ 6ನೇ ಓವರ್ನಲ್ಲಿ 6, 6, 6, 4, 6, 6 ಸಿಡಿಸುವ ಮೂಲಕ 34 ರನ್ ಚಚ್ಚಿದರು. ಈ ಮೂಲಕ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು.
5 / 6
ಶತಕದ ಬಳಿಕವೂ ಆರ್ಭಟ ಮುಂದುವರೆಸಿದ ಗಪ್ಟಿಲ್ ನವಿನ್ ಸ್ಟಿವರ್ಟ್ ಎಸೆದ 15ನೇ ಓವರ್ನಲ್ಲಿ 6, 6, 6, 4, 6 ಬಾರಿಸಿದರು. ಈ ಮೂಲಕ ಕೇವಲ 11 ಎಸೆತಗಳಲ್ಲಿ 62 ರನ್ ಕಲೆಹಾಕಿದರು. ಅಂತಿಮವಾಗಿ 54 ಎಸೆತಗಳನ್ನು ಎದುರಿಸಿದ ಗಪ್ಟಿಲ್ 11 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 131 ರನ್ ಬಾರಿಸಿ 16 ಓವರ್ಗಳಲ್ಲಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಈ ಮೂಲಕ ಸದರ್ನ್ ಸೂಪರ್ ಸ್ಟಾರ್ಸ್ ತಂಡವು ಈ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
6 / 6
ಈ ಸಿಡಿಲಬ್ಬರದ ಶತಕದೊಂದಿಗೆ ಮಾರ್ಟಿನ್ ಗಪ್ಟಿಲ್ (131) ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಎಲ್ಎಲ್ಸಿನಲ್ಲಿ ಪಂದ್ಯವೊಂದರಲ್ಲಿ 10+ ಸಿಕ್ಸ್ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದಲ್ಲದೆ ಲೆಜೆಂಡ್ಸ್ ಲೀಗ್ನಲ್ಲಿ ಒಂದೇ ಓವರ್ನಲ್ಲಿ (34 ರನ್) ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.