
ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧ ಜಯಗಳಿಸಿತು. ಆದರೆ ಈ ಪಂದ್ಯದಲ್ಲಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ ಇಂಗ್ಲೆಂಡ್ ತಂಡಕ್ಕೆ ಐಸಿಸಿ ಭಾರಿ ದಂಡ ವಿಧಿಸಿದೆ. ಇದಲ್ಲದೇ, ಭಾರತ ವಿರುದ್ಧದ ಮೂರನೇ ಟೆಸ್ಟ್ ಗೆದ್ದಿದ್ದರೂ, ಇಂಗ್ಲೆಂಡ್ ತಂಡದ ಎರಡು ಅಂಕಗಳನ್ನು ಕಡಿತಗೊಳಿಸಲಾಗಿದೆ.

ವಾಸ್ತವವಾಗಿ ಲಾರ್ಡ್ಸ್ ಟೆಸ್ಟ್‌ನಲ್ಲಿ ನಿಧಾನ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ ಇಂಗ್ಲೆಂಡ್ ತಂಡದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕಠಿಣ ಕ್ರಮ ಕೈಗೊಂಡಿದೆ. ಬೆನ್ ಸ್ಟೋಕ್ಸ್ ಮತ್ತು ತಂಡಕ್ಕೆ ಪಂದ್ಯ ಶುಲ್ಕದ 10 ಪ್ರತಿಶತ ದಂಡ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲೂ ಎರಡು ಅಂಕಗಳನ್ನು ಕಡಿತಗೊಳಿಸಲಾಗಿದೆ.

ಐಸಿಸಿಯ ಈ ನಡೆಯನ್ನು ವಿರೋಧಿಸಿರುವ ಇಂಗ್ಲೆಂಡ್ನ ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್, ಐಸಿಸಿಯನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ವಿರುದ್ಧವೂ ಆರೋಪ ಹೊರಿಸಿರುವ ವಾನ್, ಎರಡೂ ತಂಡಗಳು ತಪ್ಪು ಮಾಡಿವೆ. ಆದರೆ ಇಂಗ್ಲೆಂಡ್ ತಂಡಕ್ಕೆ ಮಾತ್ರ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಮೈಕೆಲ್ ವಾನ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಎರಡೂ ತಂಡಗಳು ಲಾರ್ಡ್ಸ್‌ನಲ್ಲಿ ನಿಧಾನವಾಗಿ ಬೌಲಿಂಗ್ ಮಾಡಿದವು. ಆದರೆ ಒಂದೇ ಒಂದು ತಂಡಕ್ಕೆ ಶಿಕ್ಷೆಯಾಯಿತು. ಇದು ನನ್ನ ತಿಳುವಳಿಕೆಗೆ ಮೀರಿದ್ದು’ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಒಂದು ಸ್ಥಾನ ಕುಸಿದು ಮೂರನೇ ಸ್ಥಾನಕ್ಕೆ ಬಂದಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಲಾರ್ಡ್ಸ್ ಟೆಸ್ಟ್ ಸೋತಿರುವ ಭಾರತ ತಂಡ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ನೀತಿ ಸಂಹಿತೆಯ ಸೆಕ್ಷನ್ 2.22 ರ ಅಡಿಯಲ್ಲಿ ಇಂಗ್ಲೆಂಡ್‌ಗೆ ಈ ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ ಹೇಳಿದೆ. ನಿಯಮದ ಪ್ರಕಾರ, ತಂಡವು ನಿಗದಿತ ಸಮಯದಲ್ಲಿ ಬೌಲಿಂಗ್ ಅನ್ನು ಪೂರ್ಣಗೊಳಿಸದಿದ್ದರೆ, ಪ್ರತಿ ಓವರ್‌ಗೆ ಪಂದ್ಯ ಶುಲ್ಕದ 5% ದಂಡ ವಿಧಿಸಲಾಗುತ್ತದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಿಧಾನಗತಿಯ ಓವರ್ ದರದ ಆರೋಪವನ್ನು ಒಪ್ಪಿಕೊಂರಿವುದರಿಂದ ಅವರ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.