ಬರೋಬ್ಬರಿ 1202 ದಿನಗಳು… ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆ
Virat Kohli Record: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಅತ್ಯಧಿಕ ದಿನಗಳ ಕಾಲ ಟಿ20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಎಂಬುದು ವಿಶೇಷ. ಹಾಗೆಯೇ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 900+ ಅಂಕಗಳನ್ನು ಕಲೆಹಾಕಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
Updated on: Jul 17, 2025 | 8:55 AM

ಐಸಿಸಿ ಟಿ20 ಬ್ಯಾಟರ್ಗಳ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಪರಿಷ್ಕರಣೆಯೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ದಿನಗಳ ಕಾಲ ಅಗ್ರಸ್ಥಾನ ಅಲಂಕರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ವಿರಾಟ್ ಕೊಹ್ಲಿಯ (Virat Kohli) ಪಾಲಾಗಿದೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಪಾಕಿಸ್ತಾನ್ ತಂಡದ ಬಾಬರ್ ಆಝಂ ಕಾಣಿಸಿಕೊಂಡಿದ್ದರು. ಇದೀಗ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯ ಬಿಡುಗಡೆಯೊಂದಿಗೆ ಕೊಹ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ವಿರಾಟ್ ಕೊಹ್ಲಿ ಕಳೆದ ಒಂದು ದಶಕದಲ್ಲಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 1202 ದಿನಗಳ ಕಾಲ ನಂಬರ್ 1 ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಟಿ20 ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅತೀ ಹೆಚ್ಚು ದಿನಗಳ ಕಾಲ ಅಗ್ರಸ್ಥಾನ ಅಲಂಕರಿಸಿದ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಆಝಂ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬರ್ ಆಝಂ 1057 ದಿನಗಳ ಕಾಲ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ.

ಹಾಗೆಯೇ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪರ 37 ಟಿ20 ಪಂದ್ಯಗಳನ್ನಾಡಿದ್ದ ಪೀಟರ್ಸನ್ 729 ದಿನಗಳ ಕಾಲ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದರು.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಬ್ಯಾಟರ್ನ ದಾಖಲೆ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಟಿ20 ರ್ಯಾಂಕಿಂಗ್ನಲ್ಲಿ 912 ಅಂಕಗಳನ್ನು ಗಳಿಸುವ ಮೂಲಕ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನ ಪಡೆದರೆ, 909 ಅಂಕಗಳೊಂದಿಗೆ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
