
ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ಗೆ ಆದ್ಯತೆ ನೀಡುವ ಸಲುವಾಗಿ ಚುಟುಕು ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಸ್ಟಾರ್ಕ್ ತಿಳಿಸಿದ್ದಾರೆ.

ಸದ್ಯ ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದಾಗ್ಯೂ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುವೆ. ನನ್ನ ಮೊದಲ ಆದ್ಯತೆ ಯಾವತ್ತಿದ್ದರೂ ಅದು ಟೆಸ್ಟ್ ಆಡುವುದು. ಹಾಗೆಯೇ 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಟಿ20 ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ ಎಂದು ಮಿಚೆಲ್ ಸ್ಟಾರ್ ತಿಳಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ 2021 ರಲ್ಲಿ ಚೊಚ್ಚಲ ಬಾರಿ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಸ್ಟಾರ್ಕ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ 13 ವರ್ಷಗಳ ಟಿ20 ಕೆರಿಯರ್ಗೆ ಗುಡ್ ಬೈ ಹೇಳಲು ಎಡಗೈ ವೇಗಿ ನಿರ್ಧರಿಸಿದ್ದಾರೆ.

ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿರುವ ಮಿಚೆಲ್ ಸ್ಟಾರ್ಕ್ 1458 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 1881 ರನ್ಗಳನ್ನು ನೀಡಿರುವ ಅವರು ಒಟ್ಟು 79 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಇದೀಗ ತಮ್ಮ 35ನೇ ವಯಸ್ಸಿನಲ್ಲಿ ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿರುವ ಮಿಚೆಲ್ ಸ್ಟಾರ್ಕ್ ಮುಂಬರುವ ದಿನಗಳಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಅವರು ಐಪಿಎಲ್ ಸೇರಿದಂತೆ ವಿಶ್ವದ ಪ್ರಮುಖ ಟಿ20 ಲೀಗ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.