
ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ರಿಕೆಟ್ ಪಂದ್ಯದ ಸಮಯದಲ್ಲಿ ಹಠಾತ್ತನೆ ಮೂರ್ಛೆ ಹೋದ ಕ್ರಿಕೆಟಿಗನೊಬ್ಬ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಮಿಜೋರಾಂನಲ್ಲಿ ನಡೆದಿದೆ. ಮಿಜೋರಾಂನಲ್ಲಿ ನಡೆದ ಸ್ಥಳೀಯ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ರಾಜ್ಯದ ಪರ ರಣಜಿ ಟ್ರೋಫಿ ಆಡಿದ್ದ ಮಾಜಿ ಕ್ರಿಕೆಟಿಗ ಕೆ. ಲಾಲ್ರೆಮ್ರುವಾಟಾ ಮೃತ ದುರ್ದೈವಿ.

ವರದಿಗಳ ಪ್ರಕಾರ, ಐಜ್ವಾಲ್ ಬಳಿಯ ಮಾವ್‌ಬೋಕ್ ನಿವಾಸಿ 38 ವರ್ಷದ ಲಾಲ್ರೆಮ್ರುವಾಟಾ ಅವರು ಎರಡನೇ ಡಿವಿಷನ್ ಟೂರ್ನಮೆಂಟ್‌ನಲ್ಲಿ ವೈಂಗ್ನುವೈ ರೈಡರ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು. ಪಂದ್ಯದ ಸಮಯದಲ್ಲಿ ಕುಸಿದು ಬಿದ್ದು ಪ್ರಜ್ಞಾಹೀನರಾದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತ್ತಾದರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.

ಘಟನೆಯ ಬಗ್ಗೆ ಮಿಜೋರಾಂ ಕ್ರೀಡಾ ಸಚಿವರು ಕೂಡ ದುಃಖ ವ್ಯಕ್ತಪಡಿಸಿದ್ದು, ‘ವೆಂಗ್ನುಯಿ ಮತ್ತು ಚೊನ್‌ಪುಯಿ ನಡುವಿನ ಪಂದ್ಯದ ಸಮಯದಲ್ಲಿ ಲಾಲ್‌ರೆಮ್ರುವಾಟಾ ಅವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಅವರನ್ನು ಬದುಕುಳಿಸಲಾಗಲಿಲ್ಲ. ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗನ ನಿಧನದ ಆಘಾತದಲ್ಲಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ಎಂದಿದ್ದಾರೆ.

ಮಿಜೋರಾಂ ಕ್ರಿಕೆಟ್ ಅಸೋಸಿಯೇಷನ್ ಕೂಡ ತನ್ನ ಮಾಜಿ ಆಟಗಾರನ ನಿಧನಕ್ಕೆ ಕಂಬನಿ ಮಿಡಿದಿದ್ದು, ‘ಇದು ಹೃದಯವಿದ್ರಾವಕ ಘಟನೆ. ಲಾಲ್ರೆಮ್ರುವಾಟಾ ಮಿಜೋರಾಂ ಪರ ಎರಡು ರಣಜಿ ಟ್ರೋಫಿ ಪಂದ್ಯಗಳು ಮತ್ತು ಏಳು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ ಎಂದು ಅಸೋಸಿಯೇಷನ್ ಹೇಳಿದೆ.

ಲಾಲ್ರೆಮ್ರುವಾಟಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು 2018 ರಲ್ಲಿ ಮಿಜೋರಾಂ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆ ಬಳಿಕ 2022 ರಲ್ಲಿ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. 2019 ಮತ್ತು 2021 ರ ನಡುವೆ, ಈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಏಳು ಟಿ20 ಪಂದ್ಯಗಳನ್ನು ಆಡಿದ್ದು 87 ರನ್‌ಗಳನ್ನು ಕಲೆಹಾಕಿದ್ದರು.