Updated on: Jul 26, 2023 | 3:12 PM
MLC 2023: ಯುಎಸ್ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಸೌತ್ ಆಫ್ರಿಕಾ ಆಟಗಾರ ಹೆನ್ರಿಕ್ ಕ್ಲಾಸೆನ್ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮೊರಿಸ್ವಿಲ್ಲೆಯ ಚರ್ಚ್ ಸ್ಟ್ರೀಟ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ vs ಸಿಯಾಟಲ್ ಓರ್ಕಾಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಸಿಯಾಟಲ್ ಓರ್ಕಾಸ್ ತಂಡದ ಹಂಗಾಮಿ ನಾಯಕ ದುಸನ್ ಶಾನಕ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ಪರ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಪೂರನ್ 34 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 68 ರನ್ ಚಚ್ಚಿದ್ದರು.
ಇನ್ನು ಅಂತಿಮ ಹಂತದಲ್ಲಿ ಟ್ರೆಂಟ್ ಬೌಲ್ಟ್ 6 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ನೊಂದಿಗೆ 20 ರನ್ ಕಲೆಹಾಕಿ 20 ಓವರ್ಗಳಲ್ಲಿ ಎಂಐ ನ್ಯೂಯಾರ್ಕ್ ತಂಡದ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 194 ಕ್ಕೆ ತಂದು ನಿಲ್ಲಿಸಿದರು.
195 ರನ್ಗಳ ಕಠಿಣ ಗುರಿ ಪಡೆದ ಸಿಯಾಟಲ್ ಓರ್ಕಾಸ್ ತಂಡಕ್ಕೆ ನೌಮಾನ್ ಅನ್ವರ್ ಉತ್ತಮ ಆರಂಭ ಒದಗಿಸಿದ್ದರು. 30 ಎಸೆತಗಳನ್ನು ಎದುರಿಸಿದ ನೌಮಾನ್ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 50 ರನ್ ಬಾರಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಹೆನ್ರಿಕ್ ಕ್ಲಾಸೆನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅಲ್ಲದೆ ಒಂದು ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಎಂಐ ನ್ಯೂಯಾರ್ಕ್ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಕೇವಲ 41 ಎಸೆತಗಳಲ್ಲಿ ಹೆನ್ರಿಕ್ ಕ್ಲಾಸೆನ್ ಶತಕ ಪೂರೈಸಿದರು. ಈ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಕೊನೆಯ ಓವರ್ಗಳಲ್ಲಿ ಕೇವಲ 7 ರನ್ಗಳ ಗುರಿ ಪಡೆಯಿತು. ಈ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹೆನ್ರಿಕ್ ಕ್ಲಾಸೆನ್ ಸಿಯಾಟಲ್ ಓರ್ಕಾಸ್ ತಂಡಕ್ಕೆ 2 ವಿಕೆಟ್ಗಳ ಜಯ ತಂದುಕೊಟ್ಟರು.
44 ಎಸೆತಗಳನ್ನು ಎದುರಿಸಿದ 7 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 110 ರನ್ ಬಾರಿಸಿದ ಹೆನ್ರಿಕ್ ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ 41 ಎಸೆತಗಳಲ್ಲಿ ಶತಕ ಪೂರೈಸಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.