
ಭಾರತ ಕ್ರಿಕೆಟ್ ತಂಡಕ್ಕೆ ಗಾಯದ ಬಿಕ್ಕಟ್ಟು ಮುಂದುವರಿದಿದೆ. ಸ್ಟಾರ್ ವೇಗಿ ಮೊಹಮ್ಮದ್ ಶಮಿ ಇದೀಗ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಶಮಿ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡದ ಭಾಗವಾಗಿರಲಿಲ್ಲ. ಆದರೆ, ಮೂರನೇ ಟೆಸ್ಟ್ ವೇಳೆಗೆ ತಂಡ ಸೇರಿಕೊಳ್ಳುವ ನಿರೀಕ್ಷೆಯಿತ್ತು.

ಮೊಹಮ್ಮದ್ ಶಮಿ ಇನ್ನೂ ಗಾಯದಿಂದ ಬಳಲುತ್ತಿರುವುದರಿಂದ, ಅವರು ಮೂರನೇ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಶಮಿ ಏಕದಿನ ವಿಶ್ವಕಪ್ ಮುಗಿದ ಬಳಿಕ ಭಾರತ ತಂಡದ ಭಾಗವಾಗಿಲ್ಲ. ಅಂದಿನಿಂದ ಅವರು ಪಾದದ ಗಾಯದಿಂದ ಬಳಲುತ್ತಿದ್ದಾರೆ ಮತ್ತು ಪ್ರಸ್ತುತ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಶಮಿ ಕೆಳಗೆ ಇಳಿಯುವಾಗ ನೋವನ್ನು ಅನುಭವಿಸುತ್ತಾರೆ ಎಂದು ಹೇಳುತ್ತದೆ. ಹೀಗಾಗಿ ಅವರು ಚಿಕಿತ್ಸೆಯ ಭಾಗವಾಗಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂತಹ ಪರಿಸ್ಥಿತಿಗಳಲ್ಲಿ ಶಮಿ ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆಡುವ ಸಾಧ್ಯತೆಯಿಲ್ಲ.

ಐಪಿಎಲ್ 2024ಕ್ಕೆ ಕೂಡ ಅವರ ಲಭ್ಯತೆ ಪ್ರಶ್ನೆಯಾಗಿದೆ. ಆದರೆ, ಬಿಸಿಸಿಐ ಶಮಿ ಅವರನ್ನು ಕರೆತರುವಲ್ಲಿ ಆತುರ ಪಡುತ್ತಿಲ್ಲ. ಯಾಕೆಂದರೆ ಟಿ20 ವಿಶ್ವಕಪ್ ವೇಳೆಗೆ ಶಮಿ ಸಂಪೂರ್ಣ ಫಿಟ್ ಆದರೆ ಸಾಕು ಎಂದು ಬಿಸಿಸಿಐ ಬಯಸುತ್ತಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ವೇಗದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಇದಲ್ಲದೆ ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್ ಅವರಂತಹ ಇತರ ಆಯ್ಕೆಗಳು ಲಭ್ಯವಿದೆ.

ಇದರ ನಡುವೆ ಕೆಎಲ್ ರಾಹುಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳಲು ಬೆಂಗಳೂರಿನ ಎನ್ಸಿಎ ಸೇರಿಕೊಂಡಿದ್ದಾರೆ. ಆದರೆ, ಜಡೇಜಾ 3ನೇ ಟೆಸ್ಟ್ಗೂ ಗೈರಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಕೊಹ್ಲಿ ಕೂಡ ಮೂರನೇ ಟೆಸ್ಟ್ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ರವೀಂದ್ರ ಜಡೇಜಾ ಅವರ ಗಾಯ ಗುಣವಾಗಲು 4 ರಿಂದ 8 ವಾರಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ. ಇದರರ್ಥ, ಎರಡನೇ ಟೆಸ್ಟ್ ಜೊತೆಗೆ ಮೂರನೇ ಟೆಸ್ಟ್ನಿಂದಲೂ ಜಡೇಜಾ ಹೊರಗುಳಿಯುವ ಸಾಧ್ಯತೆಗಳಿವೆ. ಇದರ ನಂತರ, ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ವೇಳೆಗೆ ಜಡೇಜಾ ಫಿಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.