
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. 4ನೇ ಓವರ್ನಲ್ಲಿ ಉಸ್ಮಾನ್ ಖ್ವಾಜಾ (0) ರನ್ನು ಔಟ್ ಮಾಡುವ ಮಿಯಾ ಮ್ಯಾಜಿಕ್ ತೋರಿಸಿದ್ದರು.

ಇದಾದ ಬಳಿಕ ಆಸ್ಟ್ರೇಲಿಯಾ ಬ್ಯಾಟರ್ಗಳು ಮೇಲುಗೈ ಸಾಧಿಸಿದರೂ 2ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಕಂಬ್ಯಾಕ್ ಮಾಡಿದ್ದಾರೆ. ಅದರಂತೆ 2ನೇ ದಿನದಾಟದ ಆರಂಭದಲ್ಲೇ ಟ್ರಾವಿಸ್ ಹೆಡ್ (163) ಗೆ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನು ನಾಥನ್ ಲಿಯಾನ್ (9) ಹಾಗೂ ಆಲ್ರೌಂಡರ್ ಪ್ಯಾಟ್ ಕಮಿನ್ಸ್ (9) ವಿಕೆಟ್ ಕಬಳಿಸಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ತಂಡವನ್ನು 469 ರನ್ಗಳಿಗೆ ಆಲೌಟ್ ಮಾಡಿದರು.

ಟೀಮ್ ಇಂಡಿಯಾ ಪರ ಸಿರಾಜ್ 4 ವಿಕೆಟ್ ಕಬಳಿಸಿದರೆ, ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2 ವಿಕೆಟ್ ಪಡೆದರು. ಹಾಗೆಯೇ ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು.

ವಿಶೇಷ ಎಂದರೆ ಈ 4 ವಿಕೆಟ್ಗಳೊಂದಿಗೆ ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ಗಳನ್ನು ಪೂರೈಸಿದ್ದಾರೆ. ಇದುವರೆಗೆ 19 ಟೆಸ್ಟ್ ಪಂದ್ಯಗಳನ್ನಾಡಿರುವ ಸಿರಾಜ್ ಒಟ್ಟು 51 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ಗಳನ್ನು ಕಬಳಿಸಿದ ಭಾರತದ 42ನೇ ಬೌಲರ್ ಎನಿಸಿಕೊಂಡರು.

ಮೊಹಮ್ಮದ್ ಸಿರಾಜ್ ಈ 51 ವಿಕೆಟ್ಗಳಲ್ಲಿ 21 ವಿಕೆಟ್ಗಳನ್ನು ಕಬಳಿಸಿರುವುದು ಇಂಗ್ಲೆಂಡ್ನ ಪಿಚ್ನಲ್ಲಿ ಎಂಬುದು ಮತ್ತೊಂದು ವಿಶೇಷ.