ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಹೊರಹೊಮ್ಮಿದ್ದಾರೆ. ಸಿರಾಜ್ ಅವರ ಈ ಅದ್ಭುತ ಪ್ರದರ್ಶನವೇ ಈಗ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಟಿ20 ವಿಶ್ವಕಪ್ಗಾಗಿ ಆಯ್ಕೆ ಮಾಡಲಾದ ತಂಡದಿಂದ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ಹೊರಗುಳಿದಿದ್ದಾರೆ. ಇದೀಗ ಅವರ ಸ್ಥಾನದಲ್ಲಿ ಬದಲಿ ವೇಗಿಯನ್ನು ಆಯ್ಕೆ ಮಾಡಬೇಕಿದೆ. ಆದರೆ ಅತ್ತ ರೇಸ್ನಲ್ಲಿದ್ದ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹರ್ಗಿಂತ ಸಿರಾಜ್ ಇದೀಗ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಅನುಭವಕ್ಕೆ ಮಣೆಹಾಕುವುದಾದರೆ ಮೊಹಮ್ಮದ್ ಶಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಶಮಿ ಕಳೆದ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಇನ್ನು ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸರಣಿಗಳಿಂದಲೂ ಹೊರಗುಳಿದಿದ್ದರು.
ಇತ್ತ ಈ ಎರಡು ಸರಣಿಗಳಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಚಹರ್ ಇದೀಗ ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನಕ್ಕೆ ಚಹರ್ ಅವರನ್ನು ಆಯ್ಕೆ ಮಾಡುವುದು ಅನುಮಾನ. ಇತ್ತ ಯಾವುದೇ ಪಂದ್ಯವಾಡದ ಶಮಿಯ ಆಯ್ಕೆ ಕೂಡ ಪ್ರಶ್ನಾರ್ಥಕವಾಗಿದೆ.
ಮತ್ತೊಂದೆಡೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದ ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳಲ್ಲಿ 23 ಓವರ್ಗಳನ್ನು ಎಸೆದಿರುವ ಸಿರಾಜ್ ನೀಡಿರುವುದು ಕೇವಲ 104 ರನ್ಗಳು ಮಾತ್ರ. ಅಂದರೆ ಕೇವಲ 4.52 ಎಕನಾಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನು 5 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.
ಇಂತಹದೊಂದು ಅದ್ಬುತ ಪ್ರದರ್ಶನದ ಮೂಲಕ ಇದೀಗ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಟಿ20 ತಂಡದ ಬಾಗಿಲು ಬಡಿದಿದ್ದಾರೆ ಎಂದರೆ ತಪ್ಪಾಗಲಾರದು. ಅತ್ತ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಆಯ್ಕೆ ಫಿಕ್ಸ್ ಎನ್ನುವಾಗಲೇ ಸಿರಾಜ್ ಬೆಂಕಿ ಚೆಂಡಿನ ಮೂಲಕ ಎಂಟ್ರಿ ಕೊಟ್ಟಿರುವುದು ವಿಶೇಷ.
ಹೀಗಾಗಿ ಟಿ20 ವಿಶ್ವಕಪ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲು ಮೊಹಮ್ಮದ್ ಶಮಿ, ದೀಪಕ್ ಚಹರ್ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಮೂವರು ವೇಗಿಗಳಲ್ಲಿ ಆಯ್ಕೆ ಸಮಿತಿ ಯಾರಿಗೆ ಮಣೆಹಾಕಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
ಮೊಹಮ್ಮದ್ ಸಿರಾಜ್