
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಐದು ಪಂದ್ಯಗಳ ಈ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಹೀಗೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಈ ಪ್ರಶಸ್ತಿಯೊಂದಿಗೆ ಸಿರಾಜ್ಗೆ ಬಿಸಿಸಿಐ ಕಡೆಯಿಂದಲೂ ವಿಶೇಷ ಬೋನಸ್ ಸಿಗಲಿದೆ. ಅಂದರೆ ಟೀಮ್ ಇಂಡಿಯಾ ಬೌಲರ್ ಟೆಸ್ಟ್ನಲ್ಲಿ 5 ವಿಕೆಟ್ ಕಬಳಿಸಿದರೆ ಅವರಿಗೆ 5 ಲಕ್ಷ ರೂ. ಬಹುಮಾನ ಮೊತ್ತವನ್ನು ನೀಡಲಾಗುತ್ತದೆ.

ಅದರಂತೆ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿರುವ ಮೊಹಮ್ಮದ್ ಸಿರಾಜ್ಗೆ ಬಿಸಿಸಿಐ 5 ಲಕ್ಷ ರೂ. ನೀಡಲಿದೆ. ಇದರ ಜೊತೆಗೆ 75 ಲಕ್ಷ ರೂ. ಪಂದ್ಯ ಶುಲ್ಕವನ್ನು ಸಹ ಪಡೆಯಲಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ ಟೆಸ್ಟ್ ಆಡುವ ಆಟಗಾರನಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ನೀಡಲಾಗುತ್ತದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ 5 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಅದರಂತೆ ಈ ಸರಣಿಯ ಮೂಲಕ ಪಡೆಯಲಿರುವುದು ಬರೋಬ್ಬರಿ 75 ಲಕ್ಷ ರೂ. ಇದರ ಜೊತೆಗೆ ಕೊನೆಯ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸಿ 5 ವಿಕೆಟ್ ಕಬಳಿಸಿರುವ ಕಾರಣ ಹೆಚ್ಚುವರಿ 5 ಲಕ್ಷ ರೂ. ಅನ್ನು ಸಹ ಬಹುಮಾನವಾಗಿ ಪಡೆಯಲಿದ್ದಾರೆ. ಈ ಮೂಲಕ ಒಂದೇ ಸರಣಿಯ ಮೂಲಕ ಸಿರಾಜ್ 80 ಲಕ್ಷ ರೂ. ಜೇಬಿಗಿಳಿಸಿಕೊಂಡಿದ್ದಾರೆ.

ಇನ್ನು ಈ ಸರಣಿಯಲ್ಲಿ 9 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ ಒಟ್ಟು 185.3 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ 1113 ಎಸೆತಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿ ಬೌಲರ್ ಎನಿಸಿಕೊಂಡಿದ್ದಾರೆ.