ರನ್ ರಾಶಿಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
India vs England: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ದಾಖಲೆಗಳೊಂದಿಗೆ 97 ವರ್ಷಗಳ ಹಳೆಯ ವಿಶ್ವ ದಾಖಲೆಯೊಂದನ್ನು ಸಹ ಅಳಿಸಿ ಹಾಕಿದ್ದಾರೆ. ಈ ಮೂಲಕ 5 ಮ್ಯಾಚ್ಗಳ ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್ ಪೇರಿಸಿದ ತಂಡವೆಂಬ ಹೆಗ್ಗಳಿಕೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.
Updated on:Aug 05, 2025 | 12:15 PM

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಗಿದಿದೆ. 5 ಪಂದ್ಯಗಳ ಸರಣಿಯನ್ನು 2-2 ಅಂತರದಿಂದ ಕೊನೆಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಸರಣಿಯುದ್ದಕ್ಕೂ ಭಾರತದ ಪರ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಭರ್ಜರಿ ಪ್ರದರ್ಶನೊಂದಿಗೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಹೊಸ ಇತಿಹಾಸವನ್ನು ಸಹ ರಚಿಸಿದ್ದಾರೆ.

ಹೌದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಸರಣಿವೊಂದರಲ್ಲಿ 3500+ ರನ್ ಕಲೆಹಾಕಿದೆ. ಅಂದರೆ 5 ಪಂದ್ಯಗಳ ಮೂಲಕ ಭಾರತೀಯ ಬ್ಯಾಟರ್ಗಳು ಕಲೆಹಾಕಿದ ಒಟ್ಟು ಸ್ಕೋರ್ ಬರೋಬ್ಬರಿ 3809 ರನ್ಗಳು. ಈ ಮೂಲಕ 1979 ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

1979 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3270 ರನ್ ಕಲೆಹಾಕಿದ್ದರು. ಆದರೆ ಅದು 6 ಪಂದ್ಯಗಳ ಸರಣಿಯಾಗಿತ್ತು. ಈ ಬಾರಿ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯ ಮೂಲಕ ಒಟ್ಟು 3809 ರನ್ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಸರಣಿವೊಂದರಲ್ಲಿ 3800+ ರನ್ ಕಲೆಹಾಕಿದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ.

ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಆಸೀಸ್ ಪಡೆ 1989 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯಲ್ಲಿ ಬರೋಬ್ಬರಿ 3877 ರನ್ ಕಲೆಹಾಕಿದ್ದರು. ಆದರೆ ಇದು ಪಂದ್ಯಗಳ ಸರಣಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದೀಗ 5 ಪಂದ್ಯಗಳ ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಭಾರತ ತಂಡವು 5 ಮ್ಯಾಚ್ಗಳಿಂದ ಒಟ್ಟು 3809 ರನ್ ಗಳಿಸಿ, 1928 ರಲ್ಲಿ 5 ಪಂದ್ಯಗಳ ಮೂಲಕ ಆಸ್ಟ್ರೇಲಿಯಾ ಬರೆದಿದ್ದ 3757 ರನ್ಗಳ ದಾಖಲೆಯನ್ನು ಮುರಿದಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 5 ಪಂದ್ಯಗಳ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡ ಎಂಬ ವಿಶ್ವ ದಾಖಲೆಯನ್ನು ಯಂಗ್ ಇಂಡಿಯಾ ತನ್ನದಾಗಿಸಿಕೊಂಡಿದೆ.
Published On - 12:09 pm, Tue, 5 August 25
