IND vs ENG: ಭಾರತ ತಂಡ ಗೆಲ್ಲಲ್ಲ ಅಂದೋರು ಯಾರು? ಸೋಲಲ್ಲ ಎಂದು ತಿಳಿಸಿದವರು ಯಾರು?
India vs England: 5 ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಇಂಗ್ಲೆಂಡ್ 5 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 336 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್ನಲ್ಲಿ ಇಂಗ್ಲೆಂಡ್ ತಂಡವು 22 ರನ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ನಾಲ್ಕ ನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಐದನೇ ಮ್ಯಾಚ್ನಲ್ಲಿ 6 ರನ್ಗಳ ಐತಿಹಾಸಿಕ ವಿಜಯ ಸಾಧಿಸಿ ಟೀಮ್ ಇಂಡಿಯಾ ಸರಣಿಯನ್ನು 2-2 ಅಂತರದಿಂದ ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ.
Updated on: Aug 05, 2025 | 8:30 AM

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿ ಮುಗಿದಿದೆ. ಐದು ಮ್ಯಾಚ್ಗಳ ಈ ಸರಣಿಯನ್ನು 2-2 ಅಂತರದಿಂದ ಡ್ರಾಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ವಿಶೇಷ ಎಂದರೆ ಈ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗಿತ್ತು. ಅದರಲ್ಲೂ ಕೆಲವರು ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಲಿದೆ ಎಂದಿದ್ದರು.

ಹೀಗೆ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದವರು ಯಾರು? ಇಂಗ್ಲೆಂಡ್ ವಿರುದ್ಧದ ಭಾರತ ತಂಡ ಡ್ರಾ ಸಾಧಿಸಲಿದೆ, ಖಂಡಿತ ಸರಣಿ ಗೆಲಲ್ಲಲಿದೆ ಎಂದ ಕಾಮೆಂಟೇಟರ್ಗಳು ಯಾರೆಲ್ಲಾ ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...

ಇಂಗ್ಲೆಂಡ್ನ ಮಾಜಿ ಆಟಗಾರ ಸ್ಕೈ ಸ್ಪೋರ್ಟ್ಸ್ ಕಾಮೆಂಟೇಟರ್ ಡೇವಿಡ್ ಲಾಯ್ಡ್ ಈ ಬಾರಿ ಭಾರತ ತಂಡ 4-0 ಅಂತರದಿಂದ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದರು. ಇನ್ನು ಮಾಜಿ ಕ್ರಿಕೆಟಿಗ ಫಿಲ್ ಟಫ್ನೆಲ್ ಇಂಗ್ಲೆಂಡ್ ತಂಡವು 3-1 ಅಂತರದಿಂದ ಸರಣಿ ಗೆಲ್ಲಲಿದೆ ಎಂದಿದ್ದರು. ಆದರೆ ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಈ ಬಾರಿ ಇಂಗ್ಲೆಂಡ್ ತಂಡವನ್ನು 2-3 ಅಂತರದಿಂದ ಭಾರತ ಮಣಿಸಲಿದೆ ಎಂದು ಭವಿಷ್ಯ ನುಡಿದಿದ್ದರು.

ಸೌತ್ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೈನ್ ಇಂಗ್ಲೆಂಡ್ 3-2 ಅಂತರದಿಂದ ಸರಣಿ ಗೆಲ್ಲಲಿದೆ ಎಂದರೆ, ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ 4-1 ಅಂತರದಿಂದ ಆಂಗ್ಲರು ಸರಣಿಯನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಇಂಗ್ಲೆಂಡ್ 3-2 ಅಂತರದಿಂದ ಗೆಲ್ಲಲಿದ್ದಾರೆ ಎಂದು ತಿಳಿಸಿದ್ದರು. ಇನ್ನು ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಕೂಡ ಭಾರತಕ್ಕೆ 3-2 ಅಂತರದ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದರು.

ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಆಂಗ್ಲರು ಸರಣಿಯನ್ನು 3-1 ಅಂತರದಿಂದ ಕೊನೆಗೊಳಿಸಲಿದ್ದಾರೆ ಎಂದರೆ, ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸರಣಿ 2-2 ಅಂತರದಿಂದ ಡ್ರಾ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕರುಗಳಾದ ಮೈಕಲ್ ವಾನ್ ಹಾಗೂ ಅಲಿಸ್ಟರ್ ಕುಕ್ 3-1 ಅಂತರದಿಂದ ಭಾರತ ತಂಡ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದರು.

11 ಮಾಜಿ ಕ್ರಿಕೆಟಿಗರುಗಳ ಈ ಭವಿಷ್ಯದಲ್ಲಿ ನಿಜವಾಗಿದ್ದು ದಿನೇಶ್ ಕಾರ್ತಿಕ್ ಅವರ ಪ್ರೆಡಿಕ್ಷನ್. ಡಿಕೆ ಐದು ಪಂದ್ಯಗಳ ಸರಣಿಯು 2-2 ಅಂತರದಿಂದ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದರು. ಅದರಂತೆ ಇದೀಗ ಟೀಮ್ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ 2-2 ಅಂತರದಿಂದ ಸರಣಿಯನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
