Updated on: Feb 26, 2023 | 8:30 PM
ಕ್ರೀಡೆ ಅಂದ್ಮೇಲೆ ಗೆಲುವು-ಸೋಲು ಸಹಜ...ಆದರೆ ತಂಡದ ಗೆಲುವಿಗಾಗಿ ಹೋರಾಡಿ ಪಂದ್ಯ ಗೆಲ್ಲಿಸಿಕೊಡುವವನೇ ಆ ಪಂದ್ಯದ ಶ್ರೇಷ್ಠ ಆಟಗಾರ. ಹೀಗೆ ಟೀಮ್ ಇಂಡಿಯಾ ಗೆಲುವಿನಲ್ಲಿ ಅತ್ಯುತ್ತಮ ಕಾಣಿಕೆ ನೀಡಿದ ಹಲವು ಆಟಗಾರರಿದ್ದಾರೆ. ಅವರಲ್ಲಿ ಕೆಲವೇ ಕೆಲವು ಆಟಗಾರರು ಮಾತ್ರ 50 ಕ್ಕೂ ಅಧಿಕ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೀಗೆ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
1- ಸಚಿನ್ ತೆಂಡೂಲ್ಕರ್: ಈ ದಾಖಲೆಯ ಪಟ್ಟಿಯಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರು ಅಗ್ರಸ್ಥಾನದಲ್ಲಿದೆ. ಟೀಮ್ ಇಂಡಿಯಾ ಪರ ಒಟ್ಟಾರೆ 664 ಪಂದ್ಯಗಳನ್ನಾಡಿರುವ ಸಚಿನ್ 76 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಇದು ಕೂಡ ವಿಶ್ವ ದಾಖಲೆಯಾಗಿದೆ.
2- ವಿರಾಟ್ ಕೊಹ್ಲಿ: ಸಚಿನ್ ತೆಂಡೂಲ್ಕರ್ ಬಳಿಕ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವುದು ವಿರಾಟ್ ಕೊಹ್ಲಿ. ಭಾರತದ ಪರ ಒಟ್ಟು 492 ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ 62 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
3- ಸೌರವ್ ಗಂಗೂಲಿ: ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇದ್ದಾರೆ. ಭಾರತ ತಂಡವನ್ನು 424 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಗಂಗೂಲಿ 37 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
4- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ಸೌರವ್ ಗಂಗೂಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ಪರ 436 ಪಂದ್ಯಗಳನ್ನಾಡಿರುವ ಹಿಟ್ಮ್ಯಾನ್ ಕೂಡ 37 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.
5- ಯುವರಾಜ್ ಸಿಂಗ್: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಭಾರತದ ಪರ ಒಟ್ಟು 402 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 34 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
6- ವೀರೇಂದ್ರ ಸೆಹ್ವಾಗ್: ಭಾರತ ತಂಡದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಪರ 374 ಪಂದ್ಯಗಳನ್ನಾಡಿದ್ದ ವೀರು 31 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ವಿಶೇಷ ಎಂದರೆ ಈ ಆರು ಆಟಗಾರರನ್ನು ಹೊರತುಪಡಿಸಿದರೆ ಟೀಮ್ ಇಂಡಿಯಾದ ಬೇರೆ ಯಾವುದೇ ಆಟಗಾರರು 30 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿಲ್ಲ. ಅದರಲ್ಲೂ ಭಾರತದ ಪರ 50 ಕ್ಕೂ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಕೇವಲ ಇಬ್ಬರೇ...ಅವರೇ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ.