Updated on: Jul 01, 2023 | 11:43 AM
ಮಹಾರಾಷ್ಟ್ರದಲ್ಲಿ ನಡೆದ ಚೊಚ್ಚಲ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಗಿ ರತ್ನಗಿರಿ ಜೆಟ್ಸ್ ತಂಡವು ಹೊರಹೊಮ್ಮಿದೆ. ರತ್ನಗಿರಿ ಜೆಟ್ಸ್ ಮತ್ತು ಕೊಲ್ಹಾಪುರ ಟಸ್ಕರ್ಸ್ ವಿರುದ್ಧ ಫೈನಲ್ ಪಂದ್ಯ ನಡೆದಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ರತ್ನಗಿರಿ ಜೆಟ್ಸ್ ತಂಡಕ್ಕೆ ಚಾಂಪಿಯನ್ಸ್ ಪಟ್ಟ ದೊರಕಿತು.
ಫೈನಲ್ ಪಂದ್ಯದಲ್ಲಿ ಕೊಲ್ಹಾಪುರ ಟಸ್ಕರ್ಸ್ ತಂಡದ ನಾಯಕತ್ವವನ್ನು ಅನುಭವಿ ಕೇದಾರ್ ಜಾಧವ್ ವಹಿಸಿದ್ದರೆ, ಅಜೀಂ ಕಾಜಿ ರತ್ನಗಿರಿ ಜೆಟ್ಸ್ ತಂಡವನ್ನು ಮುನ್ನಡೆಸಿದ್ದರು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಜೂನ್ 29 ರ ಗುರುವಾರ ಮಳೆಯಿಂದಾಗಿ, ಪಂದ್ಯವನ್ನು ಮೀಸಲು ದಿನದಂದು ಅಂದರೆ ಜೂನ್ 30 ರಂದು ಆಡಲು ನಿರ್ಧರಿಸಲಾಯಿತು.
ಆದರೆ ಕಾಯ್ದಿರಿಸಿದ ದಿನವೂ ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ರತ್ನಗಿರಿ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಿದ್ದರಿಂದ ರತ್ನಗಿರಿ ಜೆಟ್ಸ್ ತಂಡಕ್ಕೆ ಚಾಂಪಿಯನ್ ಕಿರೀಟ ಒಲಿಯಿತು.
ಮೀಸಲು ದಿನದಂದು ಮಳೆಯಿಂದಾಗಿ ಟಾಸ್ ತಡವಾಯಿತು. ಆದರೆ ಸ್ವಲ್ಪ ಸಮಯದ ನಂತರ ನಡೆದ ಟಾಸ್ ಗೆದ್ದ ರತ್ನಗಿರಿ ಜೆಟ್ಸ್ ತಂಡ ಕೊಲ್ಲಾಪುರ ಟಸ್ಕರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಕೊಲ್ಹಾಪುರ ತಂಡ ಮಳೆಯಿಂದಾಗಿ ಪಂದ್ಯ ನಿಲ್ಲುವ ವೇಳೆಗೆ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು.
ತಂಡದ ಪರ ನಾಯಕ ಕೇದಾರ್ ಜಾಧವ್ ಮಳೆ ನಿಲ್ಲುವ ವೇಳೆಗೆ ಗರಿಷ್ಠ 32 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ 16ನೇ ಓವರ್‌ನ ನಂತರ ಮಳೆ ಪ್ರವೇಶಿಸಿತು. ಆ ನಂತರ ಎಲ್ಲರೂ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದರು. 3 ಗಂಟೆ ಕಾಯ್ದ ಬಳಿಕವೂ ಮಳೆ ನಿಲ್ಲಲಿಲ್ಲ. ಆದ್ದರಿಂದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ರತ್ನಗಿರಿ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಇನ್ನು ಚೊಚ್ಚಲ ಚಾಂಪಿಯನ್ ಕಿರೀಟ ತೊಟ್ಟ ರತ್ನಗಿರಿ ಜೆಟ್ಸ್ ತಂಡಕ್ಕೆ 50 ಲಕ್ಷ ರೂಪಾಯಿ ಬಹುಮಾನ ಬಾಚಿಕೊಂಡಿತು.
ರನ್ನರ್ ಅಪ್ ಕೊಲ್ಹಾಪುರ ಟಸ್ಕರ್ಸ್ ತಂಡಕ್ಕೆ 25 ಲಕ್ಷ ರೂ. ಬಹುಮಾನ ಸಿಕ್ಕಿತು.
ರನ್ನರ್ ಅಪ್ ತಂಡದ ಅಂಕಿತ್ ಬಾವ್ನೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರಿಂದ ಅಂಕಿತ್ ಆರೆಂಜ್ ಕ್ಯಾಪ್ ಗೆದ್ದರು.
ಹಾಗೆಯೇ ಪುಣೇರಿ ಬಪ್ಪಾ ತಂಡದ ಸಚಿನ್ ಭೋಸ್ಲೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದರು.