Ashes 2023: ಔಟಾ ಅಥವಾ ನಾಟೌಟಾ? ವಿವಾದಕ್ಕೆ ಕಾರಣವಾದ ಕ್ಯಾಚ್..!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ವೇಳೆಯೂ ಮೂರನೇ ಅಂಪೈರ್ ನೀಡಿದ ತೀರ್ಪು ವಿವಾದಕ್ಕೀಡಾಗಿತ್ತು. ಕ್ಯಾಮರೋನ್ ಗ್ರೀನ್ ಹಿಡಿದ ಶುಭ್ಮನ್ ಗಿಲ್ ಅವರ ಕ್ಯಾಚ್ ನೆಲಕ್ಕೆ ತಾಗಿದ್ದರೂ ಅಂಪೈರ್ ಔಟ್ ನೀಡಿದ್ದರು.
Updated on: Jul 01, 2023 | 4:08 PM

Ashes 2023: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 2ನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ (Steve Smith) ಹಿಡಿದ ಕ್ಯಾಚ್ವೊಂದು ಇದೀಗ ವಿವಾದಕ್ಕೀಡಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 416 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ ವಿಕೆಟ್ ಪತನದೊಂದಿಗೆ ಕುಸಿತಕ್ಕೊಳಗಾಯಿತು. ಇಲ್ಲಿ ರೂಟ್ ವಿರುದ್ಧ ಅಂಪೈರ್ ನೀಡಿದ ತೀರ್ಪೇ ಈಗ ವಿವಾದಕ್ಕೆ ಕಾರಣವಾಗಿದೆ.

ಇಂಗ್ಲೆಂಡ್ ತಂಡವು 3 ವಿಕೆಟ್ ನಷ್ಟಕ್ಕೆ 222 ರನ್ಗಳಿಸಿದ್ದ ವೇಳೆ ಮಿಚೆಲ್ ಸ್ಟಾರ್ಕ್ ದಾಳಿಗಿಳಿದರು. ಈ ವೇಳೆ ಕ್ರೀಸ್ನಲ್ಲಿದ್ದ ಜೋ ರೂಟ್ ಪುಲ್ ಶಾಟ್ ಹೊಡೆಯಲು ಮುಂದಾದರು. ಅತ್ತ ಬ್ಯಾಕ್ವರ್ಡ್ ಸ್ಕ್ವೇರ್ನತ್ತ ಫೀಲ್ಡಿಂಗ್ನಲ್ಲಿದ್ದ ಸ್ಟೀವ್ ಸ್ಮಿತ್ ಓಡಿ ಬಂದು ಡೈವಿಂಗ್ ಕ್ಯಾಚ್ ಹಿಡಿದರು.

ಇತ್ತ ಮೂರನೇ ಅಂಪೈರ್ ಮರುಪರಿಶೀಲನೆ ವೇಳೆ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಅಂಪೈರ್ ಔಟ್ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಚೆಂಡು ನೆಲಕ್ಕೆ ತಾಗಿರುವುದಕ್ಕೆ ಸಾಕ್ಷಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿದೆ.

ಅಂದಹಾಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ವೇಳೆಯೂ ಮೂರನೇ ಅಂಪೈರ್ ನೀಡಿದ ತೀರ್ಪು ವಿವಾದಕ್ಕೀಡಾಗಿತ್ತು. ಕ್ಯಾಮರೋನ್ ಗ್ರೀನ್ ಹಿಡಿದ ಶುಭ್ಮನ್ ಗಿಲ್ ಅವರ ಕ್ಯಾಚ್ ನೆಲಕ್ಕೆ ತಾಗಿದ್ದರೂ ಅಂಪೈರ್ ಔಟ್ ನೀಡಿದ್ದರು. ಇದೀಗ ಅದೇ ಮಾದರಿಯಲ್ಲೇ ಮತ್ತೊಂದು ಕ್ಯಾಚ್ ಔಟ್ ತೀರ್ಪು ನೀಡಲಾಗಿದೆ.



















