IPL 2023: ಈ ಬಾರಿಯ ಐಪಿಎಲ್ ಮೂಲಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ವಯಸ್ಸು. 41 ವರ್ಷದ ಧೋನಿಗೆ ಇದು ಕೊನೆಯ ಐಪಿಎಲ್. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಧೋನಿ ಕುರಿತಾದ ಸದ್ದು ಮಾಡಿದ ಸುದ್ದಿಗಳಿವು.
ಆದರೆ ಇದೀಗ 41 ವರ್ಷದ ಧೋನಿಯ ಅಬ್ಬರ ನೋಡುತ್ತಿದ್ದರೆ ಅವರು ಐಪಿಎಲ್ಗೆ ವಿದಾಯ ಹೇಳುವುದು ಅನುಮಾನ. ಏಕೆಂದರೆ ಯುವಕರೇ ನಾಚುವಂತೆ ಮೈದಾನದಲ್ಲಿ ಎಂಎಸ್ಡಿ ಅಬ್ಬರಿಸುತ್ತಿದ್ದಾರೆ. ಸಿಕ್ಸ್-ಫೋರ್ಗಳ ಮೂಲಕ ಹಳೆಯ ಖದರ್ ತೋರಿಸಲಾರಂಭಿಸಿದ್ದಾರೆ.
ಇದಕ್ಕೆ ಸಾಕ್ಷಿಯೇ ಈ ಬಾರಿಯ ಐಪಿಎಲ್ನಲ್ಲಿ ಧೋನಿಯ ಸ್ಟ್ರೈಕ್ ರೇಟ್. ಇದುವರೆಗೆ 3 ಇನಿಂಗ್ಸ್ ಆಡಿರುವ ಧೋನಿ 27 ಎಸೆತಗಳನ್ನು ಎದುರಿಸಿದ 58 ರನ್ ಚಚ್ಚಿದ್ದಾರೆ. ಈ ವೇಳೆ ಧೋನಿಯ ಬ್ಯಾಟ್ನಿಂದ ಸಿಡಿದಿರುವುದು ಬರೋಬ್ಬರಿ 6 ಭರ್ಜರಿ ಸಿಕ್ಸರ್ಗಳು ಹಾಗೂ 2 ಫೋರ್ಗಳು.
ಡೆತ್ ಓವರ್ಗಳ ವೇಳೆ ಕಣಕ್ಕಿಳಿಯುತ್ತಿರುವ ಧೋನಿ 214.81 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುವ ಮೂಲಕ ಎದುರಾಳಿ ಬೌಲರ್ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಕಳೆದ ಕೆಲ ಸೀಸನ್ಗಳಿಂದ ಮರೆಯಾಗಿದ್ದ ಧೊನಿಯ ಸಿಡಿಲಬ್ಬರ ಈ ಬಾರಿ ಆರಂಭದಲ್ಲೇ ಕಾಣಿಸಿಕೊಂಡಿದೆ.
ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧೋನಿ 214.81 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಈ ಹಿಂದೆ 2013 ರಲ್ಲಿ ಧೋನಿ ಬ್ಯಾಟ್ನಿಂದ ಇಂತಹದೊಂದು ಸ್ಪೋಟಕ ಆಟ ಮೂಡಿಬಂದಿತ್ತು.
2013 ರಲ್ಲಿ 162.89 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ಧೋನಿ 461 ರನ್ ಕಲೆಹಾಕಿದ್ದರು. ಇದೀಗ 200 ಕ್ಕೂ ಅಧಿಕ ಸ್ಟ್ರೈಕ್ ರೇಟ್ ಮೂಲಕ ಐಪಿಎಲ್ 2023 ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ 41 ರ ಹರೆಯದಲ್ಲೂ ಯುವಕರೇ ನಾಚುವಂತೆ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ 27 ಎಸೆತಗಳಲ್ಲಿ ಅವರ ಬ್ಯಾಟ್ನಿಂದ ಮೂಡಿಬಂದಿರುವ 6 ಭರ್ಜರಿ ಸಿಕ್ಸ್ಗಳು.