Updated on: Apr 05, 2023 | 2:30 PM
IPL 2023: ಕ್ರಿಕೆಟ್ ಅಂಗಳದ ಅತ್ಯುತ್ತಮ ಫಿನಿಶರ್ ಯಾರು ಎಂಬ ಪ್ರಶ್ನೆಗೆ ಥಟ್ಟನೆ ಸಿಗುವ ಉತ್ತರ ಮಹೇಂದ್ರ ಸಿಂಗ್ ಧೋನಿ. ಅದು ಅಂದಿಗೂ ಹಾಗೂ ಇಂದಿಗೂ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 20ನೇ ಓವರ್ನಲ್ಲಿ ಕಣಕ್ಕಿಳಿದ ಧೋನಿ 2 ಭರ್ಜರಿ ಸಿಕ್ಸ್ ಸಿಡಿಸಿದ್ದರು.
ಈ 2 ಸಿಕ್ಸ್ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊತ್ತವು 217 ಕ್ಕೆ ಬಂದು ನಿಂತಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 205 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ಸಿಎಸ್ಕೆ ತಂಡವು 12 ರನ್ಗಳ ರೋಚಕ ಜಯ ಸಾಧಿಸಿತ್ತು. ಕೊನೆಯ ಓವರ್ನಲ್ಲಿ ಧೋನಿ ಸಿಡಿಸಿದ 2 ಸಿಕ್ಸ್ಗಳ ಪರಿಣಾಮ ಸಿಎಸ್ಕೆ ತಂಡಕ್ಕೆ ರೋಚಕ ಗೆಲುವು ಒಲಿಯಿತು ಎಂದರೆ ತಪ್ಪಾಗಲಾರದು.
ಅಂದಹಾಗೆ ಧೋನಿ ಕೊನೆಯ ಓವರ್ನಲ್ಲಿ ಸಿಕ್ಸ್ ಸಿಡಿಸುತ್ತಿರುವುದು ಇದೇ ಮೊದಲೇನಲ್ಲ. ಏಕೆಂದರೆ ಐಪಿಎಲ್ ಇತಿಹಾಸದಲ್ಲೇ 20ನೇ ಓವರ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಕೂಡ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಐಪಿಎಲ್ ಟೂರ್ನಿಯ 20ನೇ ಓವರ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ.
1- ಮಹೇಂದ್ರ ಸಿಂಗ್ ಧೋನಿ: ಸಿಎಸ್ಕೆ ತಂಡದ ನಾಯಕ ಧೋನಿ ಐಪಿಎಲ್ನಲ್ಲಿ 20 ಓವರ್ನಲ್ಲಿ ಇದುವರೆಗೆ 277 ಎಸೆತಗಳನ್ನು ಎದುರಿಸಿ 679 ರನ್ ಕಲೆಹಾಕಿದ್ದದ್ದಾರೆ. ಈ ವೇಳೆ ಒಟ್ಟು 55 ಸಿಕ್ಸ್ ಸಿಡಿಸಿರುವುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲೇ 20ನೇ ಓವರ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿ ಧೋನಿ ಇತಿಹಾಸ ನಿರ್ಮಿಸಿದ್ದಾರೆ.
2- ಕೀರನ್ ಪೊಲಾರ್ಡ್: ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೀರನ್ ಪೊಲಾರ್ಡ್ 62 ಇನಿಂಗ್ಸ್ಗಳಲ್ಲಿ 20ನೇ ಓವರ್ನಲ್ಲಿ ಬ್ಯಾಟ್ ಮಾಡಿದ್ದರು. ಈ ವೇಳೆ 33 ಸಿಕ್ಸ್ ಸಿಡಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
3- ರವೀಂದ್ರ ಜಡೇಜಾ: ಸಿಎಸ್ಕೆ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ 62 ಇನಿಂಗ್ಸ್ನಲ್ಲಿ 20ನೇ ಓವರ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಜಡ್ಡು ಬ್ಯಾಟ್ನಿಂದ 26 ಸಿಕ್ಸ್ಗಳು ಮೂಡಿಬಂದಿವೆ.
4- ಹಾರ್ದಿಕ್ ಪಾಂಡ್ಯ: ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಇದುವರೆಗೆ 36 ಬಾರಿ 20ನೇ ಓವರ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 25 ಸಿಕ್ಸ್ಗಳನ್ನು ಬಾರಿಸಿದ್ದಾರೆ.
5- ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 20ನೇ ಓವರ್ನಲ್ಲಿ 27 ಬಾರಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 23 ಸಿಕ್ಸ್ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದರೆ ಐಪಿಎಲ್ ಇತಿಹಾಸದಲ್ಲಿ ಧೋನಿಯನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟರ್ 20ನೇ ಓವರ್ನಲ್ಲಿ ಬ್ಯಾಟ್ ಬೀಸಿ 50 ಕ್ಕಿಂತ ಹೆಚ್ಚಿನ ಸಿಕ್ಸ್ ಬಾರಿಸಿಲ್ಲ. ಇದುವೇ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಂಗಳದ ಬೆಸ್ಟ್ ಫಿನಿಶರ್ ಎಂಬುದಕ್ಕೆ ಸಾಕ್ಷಿ.