- Kannada News Photo gallery Cricket photos IPL 2023 KKR sign Jason Roy after Shakib Al Hasan unavailable for whole season
IPL 2023: ಶಕೀಬ್ ಅಲ್ ಹಸನ್ ಬದಲು ಕೆಕೆಆರ್ ತಂಡಕ್ಕೆ ಎಂಟ್ರಿಕೊಟ್ಟ ಸ್ಫೋಟಕ ಓಪನರ್
IPL 2023: ಈ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿಗೆ ಜೇಸನ್ ರಾಯ್ ಕೂಡ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ.
Updated on: Apr 05, 2023 | 3:08 PM

ಖಾಯಂ ನಾಯಕ ಶ್ರೇಯಸ್ ಅಯ್ಯರ್ ಇಲ್ಲದೆ ಮೊದಲ ಪಂದ್ಯವನ್ನಾಡಿದ್ದ ಕೆಕೆಆರ್ ತಂಡ ಹೀನಾಯ ಸೋಲನುಭವಿಸಿತ್ತು. ಆದಾದ ಬಳಿಕ ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ತಯಾರಿ ಆರಂಭಿಸಿದ್ದ ರಾಣಾ ಪಡೆಗೆ ಬಾಂಗ್ಲಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ಐಪಿಎಲ್ನಿಂದ ಹಿಂದೆ ಸರಿದಿದ್ದು ಶಾಕ್ ನೀಡಿತ್ತು. ಹೀಗಾಗಿ ಶಕೀಬ್ ಬದಲಿಯಾಗಿ ಹುಡುಕುತ್ತಿದ್ದ ಶಾರೂಖ್ ತಂಡಕ್ಕೆ ಸ್ಫೋಟಕ ಬ್ಯಾಟರ್ನ ಆಗಮನವಾಗಿದೆ.

ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಈ ಬಾರಿಯ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರನಾಗಿ ಕೆಕೆಆರ್ ಫ್ರಾಂಚೈಸ್ ಇಂಗ್ಲೆಂಡ್ನ ಸ್ಫೋಟಕ ಓಪನರ್ ಜೇಸನ್ ರಾಯ್ ಜತೆ ಒಪ್ಪಂದ ಮಾಡಿಕೊಂಡಿದೆ. ಜೇಸನ್ ರಾಯ್ ಅವರನ್ನು 2.8 ಕೋಟಿ ರೂ.ಗೆ ಖರೀದಿಸಲಾಗಿದೆ.

ಈ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿಗೆ ಜೇಸನ್ ರಾಯ್ ಕೂಡ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಆದರೆ ಇದೀಗ ಈ ಆಟಗಾರ ಈಗ ಕೆಕೆಆರ್‌ಗೆ ಎಂಟ್ರಿ ಪಡೆದಿದ್ದಾರೆ.

ಜೇಸನ್ ರಾಯ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕಾರಣವೂ ಇದ್ದು, ಐಪಿಎಲ್ಗೂ ಮುನ್ನ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಈ ಸ್ಫೋಟಕ ಬ್ಯಾಟರ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಕಣಕ್ಕಿಳಿದಿದ್ದು, ಕೇವಲ 63 ಎಸೆತಗಳಲ್ಲಿ 145 ರನ್ಗಳ ಸ್ಫೋಟಕ ಆಟ ಆಡಿದ್ದರು. 230ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದ ರಾಯ್ ಅವರ ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ ಮತ್ತು 20 ಬೌಂಡರಿಗಳು ಸೇರಿದ್ದವು.

ಜೇಸನ್ ರಾಯ್ ಐಪಿಎಲ್ ಆಡುತ್ತಿರುವುದು ಇದೇ ಮೊದಲಲ್ಲ. ಕಳೆದ ಸೀಸನ್ನಲ್ಲಿ ಈ ಆಟಗಾರನನ್ನು ಗುಜರಾತ್ ಟೈಟಾನ್ಸ್ 2 ಕೋಟಿಗೆ ಖರೀದಿಸಿತ್ತು. ಆದರೆ ಆ ಸೀಸನ್ನಿಂದ ರಾಯ್ ಹಿಂದೆ ಸರಿದಿದ್ದರು. 2017 ರಲ್ಲಿ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕೆ ಎಂಟ್ರಿಕೊಟ್ಟಿದ ರಾಯ್, ಈ ಪಂದ್ಯಾವಳಿಯಲ್ಲಿ ಇದುವರೆಗೆ 13 ಪಂದ್ಯಗಳನ್ನಾಡಿದ್ದು, ಇದರಲ್ಲಿ 29.90 ಸರಾಸರಿಯಲ್ಲಿ 329 ರನ್ ಗಳಿಸಿದ್ದಾರೆ. ರಾಯ್ ಅವರ ಸ್ಟ್ರೈಕ್ ರೇಟ್ 129ಕ್ಕಿಂತ ಹೆಚ್ಚಿದೆ.

ಅಂದಹಾಗೆ, ರಾಯ್ 64 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 137 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ 1522 ರನ್ ಗಳಿಸಿದ್ದಾರೆ. ಅಲ್ಲದೆ ರಾಯ್ ಪ್ರಸ್ತುತ ಉತ್ತಮ ಫಾರ್ಮ್ನಲ್ಲಿದ್ದು, ಅದಕ್ಕಾಗಿಯೇ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈಗ ರಾಯ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
