ನೇಪಿಯರ್ನ ಮೆಕ್ಲೀನ್ ಪಾರ್ಕ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ (Pakistan) ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಮುಹಮ್ಮದ್ ಅಬ್ಬಾಸ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಪಾದಾರ್ಪಣೆ ಪಂದ್ಯದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ.
ಪಾಕಿಸ್ತಾನ್ ವಿರುದ್ಧದ ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಮುಹಮ್ಮದ್ ಅಬ್ಬಾಸ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಚೊಚ್ಚಲ ಏಕದಿನ ಪಂದ್ಯದಲ್ಲೇ ಅತೀ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಕೃನಾಲ್ ಪಾಂಡ್ಯ ಹೆಸರಿನಲ್ಲಿತ್ತು. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಪಾಂಡ್ಯ ಕೇವಲ 26 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಮುಹಮ್ಮದ್ ಅಬ್ಬಾಸ್ ಈ ದಾಖಲೆ ಮುರಿದಿದ್ದಾರೆ.
ಪಾಕಿಸ್ತಾನ್ ವಿರುದ್ಧ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಚೊಚ್ಚಲ ಏಕದಿನ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಮುಹಮ್ಮದ್ ಅಬ್ಬಾಸ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಬಾರಿಸಿ ಮಿಂಚಿದರು.
ವಿಶೇಷ ಎಂದರೆ ಮುಹಮ್ಮದ್ ಅಬ್ಬಾಸ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಝರ್ ಅಬ್ಬಾಸ್ ಅವರ ಸುಪುತ್ರ. 90ರ ದಶಕದಲ್ಲಿ ಪಾಕ್ನಲ್ಲಿ ಆಡಿದ್ದ ಅಝರ್ ಆ ಬಳಿಕ ನ್ಯೂಝಿಲೆಂಡ್ಗೆ ವಲಸೆ ಹೋಗಿದ್ದರು. ಅಲ್ಲಿನ ಪೌರತ್ವವನ್ನು ಪಡೆದಿದ್ದರು. ಇದೀಗ ಅಝರ್ ಅಬ್ಬಾಸ್ ಅವರ ಪುತ್ರ ಮುಹಮ್ಮದ್ ಅಬ್ಬಾಸ್ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ನ್ಯೂಝಿಲೆಂಡ್ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದಾರೆ. ಅದು ಕೂಡ ವಿಶ್ವ ದಾಖಲೆಯೊಂದಿಗೆ ಎಂಬುದು ವಿಶೇಷ.