CSK ಗೆ ಶಾಕ್ ನೀಡಿ ಇತಿಹಾಸ ನಿರ್ಮಿಸಿದ RCB
IPL 2025 CSK vs RCB: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 196 ರನ್ ಕಲೆಹಾಕಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 146 ರನ್ಗಳಿಸಿ 50 ರನ್ಗಳಿಂದ ಸೋಲೊಪ್ಪಿಕೊಂಡಿದೆ.
Updated on: Mar 29, 2025 | 9:54 AM

IPL 2025: ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ ಪಡೆ ಐಪಿಎಲ್ನಲ್ಲಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಗೆಲುವುಗಳ ಮೂಲಕ ಎಂಬುದು ವಿಶೇಷ.

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್ಕೆ ವಿರುದ್ಧ ಒಮ್ಮೆಯೂ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರಲಿಲ್ಲ. ಅಂದರೆ ಕಳೆದ 17 ವರ್ಷಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಂತಹ ಇತಿಹಾಸವೇ ಇರಲಿಲ್ಲ.

ಆದರೀಗ ಆರ್ಸಿಬಿ ಪಡೆ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ಸಿಬಿ 27 ರನ್ಗಳಿಂದ ಮಣಿಸಿತ್ತು. ಇದೀಗ ಈ ಬಾರಿಯ ಮೊದಲ ಪಂದ್ಯದಲ್ಲೇ ಸಿಎಸ್ಕೆ ಪಡೆಯನ್ನು 50 ರನ್ಗಳಿಂದ ಬಗ್ಗು ಬಡಿದಿದೆ.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ದಾಖಲಿಸಿದೆ. ಇನ್ನು ಉಭಯ ತಂಡಗಳು ಮೇ 3 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲೂ ಆರ್ಸಿಬಿ ಜಯ ಸಾಧಿಸಿದರೆ, ಅದು ಸಹ ಇತಿಹಾಸ ಪುಟಕ್ಕೆ ಸೇರ್ಪಡೆಯಾಗಲಿದೆ.

ಒಟ್ಟಿನಲ್ಲಿ ಆರ್ಸಿಬಿ ವಿರುದ್ಧ ಸದಾ ಮೇಲುಗೈ ಸಾಧಿಸುತ್ತಾ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಬೃಹತ್ ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಆರ್ಸಿಬಿ ಪಡೆ ಈ ಬಾರಿ ಹೊಸ ಅಧ್ಯಾಯ ಬರೆಯುವ ಸೂಚನೆಯನ್ನಂತು ನೀಡಿದ್ದಾರೆ.



















