
ಬಾಂಗ್ಲಾದೇಶ್ ತಂಡದ ಹಿರಿಯ ಬ್ಯಾಟರ್ ಮುಶ್ಫಿಕುರ್ ರಹೀಮ್ (Mushfiqur Rahim) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 100ನೇ ಪಂದ್ಯದಲ್ಲಿ ನೂರು ರನ್ಗಳಿಸುವ ಮೂಲಕ. ಐರ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಶ್ಫಿಕುರ್ ರಹೀಮ್ ಬಾಂಗ್ಲಾದೇಶ್ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮತ್ತೊಂದು ರೆಕಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಢಾಕಾದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಶ್ಫಿಕುರ್ ರಹೀಮ್ 106 ರನ್ ಬಾರಿಸಿದ್ದಾರೆ.

ಇದರೊಂದಿಗೆ ನೂರನೇ ಟೆಸ್ಟ್ನಲ್ಲಿ ಶತಕ ಬಾರಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಮುಶ್ಫಿಕುರ್ ರಹೀಮ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 11ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಕಾಲಿನ್ ಕೌಡ್ರಿ (ಇಂಗ್ಲೆಂಡ್), ಜಾವೇದ್ ಮಿಯಾಂದಾದ್ (ಪಾಕಿಸ್ತಾನ್), ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್), ಅಲೆಕ್ ಸ್ಟೀವರ್ಟ್ (ಇಂಗ್ಲೆಂಡ್), ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ್), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಗ್ರೇಮ್ ಸ್ಮಿತ್ (ಸೌತ್ ಆಫ್ರಿಕಾ), ಹಾಶಿಮ್ ಆಮ್ಲಾ (ಸೌತ್ ಆಫ್ರಿಕಾ), ಜೋ ರೂಟ್ (ಇಂಗ್ಲೆಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) ಮಾತ್ರ ಈ ಸಾಧನೆ ಮಾಡಿದ್ದರು.

ಇದೀಗ 100ನೇ ಟೆಸ್ಟ್ನಲ್ಲಿ ಸೆಂಚುರಿ ಸಿಡಿಸುವ ಮೂಲಕ ವಿಶೇಷ ಸಾಧಕರ ಪಟ್ಟಿಗೆ ಬಾಂಗ್ಲಾದೇಶ್ ಬ್ಯಾಟರ್ ಮುಶ್ಫಿಕುರ್ ರಹೀಮ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಮುಶ್ಫಿಕುರ್ ರಹೀಮ್ ಅವರ ಶತಕದ ನೆರವಿನೊಂದಿಗೆ ಈ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ 120 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 387 ರನ್ ಕಲೆಹಾಕಿದೆ.