
ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಟಿ20 ವಿದೇಶಿ ಲೀಗ್ಗಳಲ್ಲಿ ಆಡುವುದನ್ನು ಮುಂದುವರೆಸಿರುವ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಯಾವ ಬ್ಯಾಟ್ಸ್ಮನ್ಗೂ ಮಾಡಲು ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

2025ರ ಐಪಿಎಲ್ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದ್ದ ನಿಕೋಲಸ್ ಪೂರನ್ ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸದ್ದು ಮಾಡುತ್ತಿದ್ದು, ಈ ಚುಟುಕು ಮಾದರಿಯಲ್ಲಿ 500 ಸಿಕ್ಸರ್‌ಗಳನ್ನು ಬಾರಿಸಿದ ಈ ದಶಕದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಗಸ್ಟ್ 30 ರಂದು ಟ್ರಿನಿಡಾಡ್‌ನ ತರೋವಾದಲ್ಲಿರುವ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಬಾರ್ಬಡೋಸ್ ರಾಯಲ್ಸ್ ವಿರುದ್ಧ ನಡೆದ ಸಿಪಿಎಲ್ 2025 ರ 16 ನೇ ಪಂದ್ಯದಲ್ಲಿ ಪೂರನ್ ಈ ಸಾಧನೆ ಮಾಡಿದರು. ಈ ದಶಕದಲ್ಲಿ ಪೂರನ್ ಆಡಿರುವ 278 ಇನ್ನಿಂಗ್ಸ್‌ಗಳಲ್ಲಿ 500 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿರುವ ಆಂಡ್ರೆ ರಸೆಲ್ ಈ ದಶಕದಲ್ಲಿ 358 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಆಡಿರುವ 247 ಇನ್ನಿಂಗ್ಸ್‌ಗಳಲ್ಲಿ 348 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಇದ್ದು ಅವರು ಇದುವರೆಗೆ 344 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

2020 ರಲ್ಲಿ 48 ಸಿಕ್ಸರ್‌ಗಳನ್ನು ಬಾರಿಸಿದ್ದ ಪೂರನ್, 2021 ರಲ್ಲಿ 66, 2022 ರಲ್ಲಿ 58, 2023 ರಲ್ಲಿ 77 ಮತ್ತು 2024 ರಲ್ಲಿ 170 ಸಿಕ್ಸರ್ ಬಾರಿಸಿದ್ದರು. ಪ್ರಸ್ತುತ ವರ್ಷ ಅಂದರೆ 2025 ರಲ್ಲಿ ಇಲ್ಲಿಯವರೆಗೆ, ಅವರು 42 ಇನ್ನಿಂಗ್ಸ್‌ಗಳಲ್ಲಿ 85 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರ ಒಟ್ಟು ಸಿಕ್ಸರ್‌ಗಳ ಸಂಖ್ಯೆ 504ಕ್ಕೆ ತಲುಪಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ದಶಕದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಪೂರನ್ ಈಗ ಮೂರನೇ ಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ ಮೊದಲೆರಡು ಸ್ಥಾನಗಳಲಿದ್ದಾರೆ. 2010 ರ ದಶಕದಲ್ಲಿ ಗೇಲ್ 363 ಇನ್ನಿಂಗ್ಸ್‌ಗಳಲ್ಲಿ 920 ಸಿಕ್ಸರ್‌ಗಳನ್ನು ಬಾರಿಸಿದರೆ, ಪೊಲಾರ್ಡ್ 427 ಇನ್ನಿಂಗ್ಸ್‌ಗಳಲ್ಲಿ 614 ಸಿಕ್ಸರ್‌ಗಳನ್ನು ಬಾರಿಸಿದ್ದರು.