
ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಸ್ಫೋಟಕ ದಾಂಡಿಗ ನಿಕೋಲಸ್ ಪೂರನ್ (Nicholas Pooran) ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಬರೋಬ್ಬರಿ 10000 ರನ್ ಕಲೆಹಾಕುವ ಮೂಲಕ. ಇತ್ತ ಹತ್ತು ಸಾವಿರ ರನ್ ಕಲೆಹಾಕಿದರೂ ಪಾಕ್ ಬ್ಯಾಟರ್ ಬಾಬರ್ ಆಝಂ ಅವರ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಯುಎಇನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಎಂಐ ಎಮಿರೇಟ್ಸ್ ಪರ ಕಣಕ್ಕಿಳಿಯುತ್ತಿರುವ ಪೂರನ್ ಶಾರ್ಜಾ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 5 ರನ್ ಕಲೆಹಾಕಿದ್ದರು. ಈ ಐದು ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ 10000 ರನ್ಗಳನ್ನು ಪೂರೈಸಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 10000 ರನ್ ಕಲೆಹಾಕಿದ ವಿಶ್ವದ ವಿಶ್ವದ 19ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್ನ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್ ಹಾಗೂ ಕೀರನ್ ಪೊಲಾರ್ಡ್ ಈ ಸಾಧನೆ ಮಾಡಿದ್ದರು.

ಪೂರನ್ ಅವರ ಈ ಸಾಧನೆಯ ಹೊರತಾಗಿಯೂ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 10000 ರನ್ ಕಲೆಹಾಕಿದ ವಿಶ್ವ ದಾಖಲೆ ಪಾಕಿಸ್ತಾನ್ ಬ್ಯಾಟರ್ ಬಾಬರ್ ಆಝಂ ಹೆಸರಿನಲ್ಲಿಯೇ ಉಳಿದಿದೆ. ಬಾಬರ್ ಕೇವಲ 271 ಇನಿಂಗ್ಸ್ಗಳ ಮೂಲಕ ಟಿ20 ಕ್ರಿಕೆಟ್ನಲ್ಲಿ ಹತ್ತು ಸಾವಿರ ರನ್ ಕಲೆಹಾಕಿದ್ದಾರೆ.

ಇತ್ತ 10 ಸಾವಿರ ರನ್ ಕಲೆಹಾಕಲು ನಿಕೋಲಸ್ ಪೂರನ್ ತೆಗೆದುಕೊಂಡಿರುವುದು ಬರೋಬ್ಬರಿ 400 ಇನಿಂಗ್ಸ್ಗಳನ್ನು. ಇನ್ನು ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 299 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. ಹಾಗೆಯೇ ಕ್ರಿಸ್ ಗೇಲ್ 285 ಇನಿಂಗ್ಸ್ಗಳ ಮೂಲಕ 10000 ರನ್ಗಳ ಗಡಿಮುಟ್ಟಿದ್ದರು. ಅಂದರೆ ಪೂರನ್ 10000 ಕ್ಲಬ್ಗೆ ಸೇರಿದರೂ ಬಾಬರ್ ಆಝಂ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.