
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್ನಲ್ಲಿ ಅಫ್ಘಾನಿಸ್ತಾನ್ ಸ್ಪಿನ್ನರ್ ನೂರ್ ಅಹ್ಮದ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಟೂರ್ನಿಯ 22ನೇ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಹಾಗೂ ಪಾರ್ಲ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡರ್ಬನ್ ಸೂಪರ್ ಜೈಂಟ್ಸ್ ತಂಡಕ್ಕೆ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಟ್ಝ್ಕ್ (78) ಸ್ಪೋಟಕ ಆರಂಭ ಒದಗಿಸಿದ್ದರು.

ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಡೆತ್ ಓವರ್ಗಳಲ್ಲಿ ಅಬ್ಬರಿಸಿದರು. ಕೇವಲ 17 ಎಸೆತಗಳನ್ನು ಎದುರಿಸಿದ ಕ್ಲಾಸೆನ್ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 50 ರನ್ ಸಿಡಿಸಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಡರ್ಬನ್ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.

209 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಪಾರ್ಲ್ ರಾಯಲ್ಸ್ ತಂಡಕ್ಕೆ ಎಡಗೈ ವೇಗಿ ರೀಸ್ ಟೋಪ್ಲಿ ಆರಂಭಿಕ ಆಘಾತ ನೀಡಿದರು. ಜೋಸ್ ಬಟ್ಲರ್ (6) ವಿಕೆಟ್ ಪಡೆಯುವ ಮೂಲಕ ಟೋಪ್ಲಿ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ನೂರ್ ಅಹ್ಮದ್ ಅವರ ಸ್ಪಿನ್ ಮೋಡಿ ಶುರುವಾಯಿತು.

ಗೂಗ್ಲಿ ಹಾಗೂ ಮಣಿಕಟ್ಟಿನ ಸ್ಪಿನ್ ಮ್ಯಾಜಿಕ್ ತೋರಿಸಿದ ನೂರ್ ಅಹ್ಮದ್ ಡೇವಿಡ್ ಮಿಲ್ಲರ್ (3), ಆಂಡಿಲೆ ಫೆಹ್ಲುಕ್ವಾಯೊ (0), ಜಾರ್ನ್ ಫಾರ್ಚುಯಿನ್ (2), ಒಬೆಡ್ ಮೆಕಾಯ್ (7) ಹಾಗೂ ತಬ್ರೇಝ್ ಶಂಸಿ (0) ವಿಕೆಟ್ ಪಡೆದರು. ಈ ಮೂಲಕ ಪಾರ್ಲ್ ರಾಯಲ್ಸ್ ತಂಡವನ್ನು 13.2 ಓವರ್ಗಳಲ್ಲಿ 83 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ನೂರ್ ಅಹ್ಮದ್ ಅವರ ಈ ಸ್ಪಿನ್ ಮೋಡಿಯ ನೆರವಿನಿಂದ ಡರ್ಬನ್ ಸೂಪರ್ ಜೈಂಟ್ಸ್ ತಂಡವು 125 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ 3.2 ಓವರ್ಗಳಲ್ಲಿ ಕೇವಲ 11 ರನ್ ನೀಡಿ 5 ವಿಕೆಟ್ ಕಬಳಿಸಿದ ನೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಅಂದಹಾಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೂರ್ ಅಹ್ಮದ್ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಈಗಾಗಲೇ ಜಿಟಿ ಪರ 13 ಪಂದ್ಯಗಳನ್ನಾಡಿರುವ 19 ವರ್ಷದ ಯುವ ಸ್ಪಿನ್ನರ್ 16 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲೂ ನೂರ್ ಕಡೆಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು.