
ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಿದೆ. ಈ ಪಂದ್ಯದ ಮೊದಲ ದಿನವೇ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ಉಭಯ ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಪರವಾಗಿ, ನಾಯಕ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಇಬ್ಬರೂ ಶತಕ ಬಾರಿಸುವ ಮೂಲಕ ಈ ಸರಣಿಯನ್ನು ಅಬ್ಬರದಿಂದ ಆರಂಭಿಸಿದ್ದಾರೆ.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ಗೆ ಇದು 30ನೇ ಟೆಸ್ಟ್ ಶತಕವಾಗಿದೆ. ಇದರೊಂದಿಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿಲಿಯಮ್ಸನ್ ಇದೀಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದುವರೆಗೆ 113 ಟೆಸ್ಟ್ ಇನ್ನಿಂಗ್ಸ್ನಲ್ಲಿ 29 ಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಫ್ಯಾಬ್ ಫೋರ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಇನ್ನು ಫ್ಯಾಬ್-4 ನಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದು, ಸ್ಮಿತ್ ಆಡಿರುವ 107 ಟೆಸ್ಟ್ ಪಂದ್ಯಗಳಲ್ಲಿ 32 ಶತಕಗಳನ್ನು ಸಿಡಿಸಿದ್ದಾರೆ.

ಇದೀಗ ಎರಡನೇ ಸ್ಥಾನಕ್ಕೇರಿರುವ ಕೇನ್ ವಿಲಿಯಮ್ಸನ್ 97 ಟೆಸ್ಟ್ ಪಂದ್ಯಗಳಿಂದ 30 ಟೆಸ್ಟ್ ಶತಕ ಸಿಡಿಸಿದ್ದಾರೆ. ಹಾಗೆಯೇ 137 ಟೆಸ್ಟ್ ಪಂದ್ಯಗಳಲ್ಲಿ 30 ಶತಕ ದಾಖಲಿಸಿರುವ ಜೋ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ.

ಇದಲ್ಲದೆ ಕೇನ್ ವಿಲಿಯಮ್ಸನ್ ವೇಗವಾಗಿ 30 ಟೆಸ್ಟ್ ಶತಕಗಳನ್ನು ಪೂರೈಸಿದ ಅಂದರೆ ಕಡಿಮೆ ಇನ್ನಿಂಗ್ಸ್ಗಳಲ್ಲಿ 30 ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಇದುವರೆಗೆ 169 ಇನ್ನಿಂಗ್ಸ್ ಆಡಿರುವ ಕೇನ್ 30 ಟೆಸ್ಟ್ ಶತಕ ಪೂರೈಸಿದ್ದಾರೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲ್ಲಿರುವ ಸಚಿನ್ ತೆಂಡೂಲ್ಕರ್ 159 ಇನ್ನಿಂಗ್ಸ್ಗಳಲ್ಲಿ 30 ಶತಕ ಪೂರೈಸಿದ್ದಾರೆ. 162 ಇನ್ನಿಂಗ್ಸ್ ಹಾಗೂ 167 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಮ್ಯಾಥ್ಯೂ ಹೇಡನ್ ಕ್ರಮವಾಗಿ 2 ಮತ್ತು 3 ನೇ ಸ್ಥಾನದಲ್ಲಿದ್ದಾರೆ.