
ODI World Cup 2023: ಏಕದಿನ ವಿಶ್ವಕಪ್ ಕ್ರಿಕೆಟ್ ಮಹಾಸಮರ ಶುರುವಾಗಲು ಇನ್ನುಳಿದಿರುವುದು ಕೇವಲ 2 ತಿಂಗಳು ಮಾತ್ರ. ಅಕ್ಟೋಬರ್ 5 ರಿಂದ ಕ್ರಿಕೆಟ್ ಕದನ ಆರಂಭವಾಗಲಿದ್ದು, ಫೈನಲ್ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ.

ಅದಕ್ಕೂ ಮುನ್ನ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಯಾವುದೆಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾಥ್ ಈ ಸಲ ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ.

ಈ ಬಾರಿಯ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಅವರು ಸೆಮಿಫೈನಲ್ ಪ್ರವೇಶಿಸುವುದು ಖಚಿತ. ಹೀಗಾಗಿ ಟೀಮ್ ಇಂಡಿಯಾವನ್ನು ನಾಲ್ಕರ ಘಟ್ಟದಲ್ಲಿ ಎದುರು ನೋಡಬಹುದು ಎಂದು ಮೆಕ್ಗ್ರಾಥ್ ತಿಳಿಸಿದ್ದಾರೆ.

ಹಾಗೆಯೇ ಆಸ್ಟ್ರೇಲಿಯಾ ತಂಡವು ಅತ್ಯುತ್ತಮ ಸಮತೋಲನದಿಂದ ಕೂಡಿದೆ. ತಂಡದಲ್ಲಿ ಉತ್ತಮ ಆಲ್ರೌಂಡರ್ಗಳಿದ್ದು, ಹೀಗಾಗಿ ಆಸೀಸ್ ಪಡೆ ಕೂಡ ಸೆಮಿಫೈನಲ್ ಪ್ರವೇಶಿಸಲಿದೆ ಎಂದಿದ್ದಾರೆ.

ಅದೇ ರೀತಿ ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಇಂಗ್ಲೆಂಡ್ ಅನ್ನು ಕೂಡ ಸೆಮಿ ಫೈನಲ್ನಲ್ಲಿ ಎದುರು ನೋಡಬಹುದು ಎಂದು ಮೆಕ್ಗ್ರಾಥ್ ತಿಳಿಸಿದ್ದಾರೆ.

ಇದಲ್ಲದೆ ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನ್ ಕೂಡ ಸೆಮಿಫೈನಲ್ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ ಎಂದು ಗ್ಲೆನ್ ಮೆಕ್ಗ್ರಾಥ್ ತಿಳಿಸಿದ್ದಾರೆ.

ಅಂದರೆ ಗ್ಲೆನ್ ಮೆಕ್ಗ್ರಾಥ್ ಪ್ರಕಾರ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸುವುದು ಖಚಿತ. ಅದರಂತೆ ಈ ನಾಲ್ಕು ತಂಡಗಳ ನಾಲ್ಕರ ಘಟ್ಟದಲ್ಲಿ ಕಾಣಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.