
ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನಿರಂತರವಾಗಿ ತರಬೇತುದಾರರು ಮತ್ತು ನಾಯಕರ ಬದಲಾವಣೆಯಾಗುತ್ತಲೆ ಇದೆ. ಇದೀಗ ಈ ಟ್ರೆಂಡ್ ಇನ್ನೂ ಮುಂದುವರೆದಿದ್ದು, ಪಾಕಿಸ್ತಾನ ಸೀಮಿತ ಓವರ್ಗಳ ತಂಡಕ್ಕೆ ಹೊಸ ಹಂಗಾಮಿ ಮುಖ್ಯ ಕೋಚ್ನ ನೇಮಕವಾಗಿದೆ. ಅದರಂತೆ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಆಕಿಬ್ ಜಾವೇದ್ ಅವರನ್ನು ಏಕದಿನ ಮತ್ತು ಟಿ20 ತಂಡದ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ.

ವಾಸ್ತವವಾಗಿ ಈ ಹಿಂದೆ ಪಾಕ್ ಸೀಮಿತ ಓವರ್ಗಳ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದ ಗ್ಯಾರಿ ಕರ್ಸ್ಟನ್, ಪಾಕಿಸ್ತಾನ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕೆಲವೇ ದಿನಗಳ ಹಿಂದೆ ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಜೇಸನ್ ಗಿಲ್ಲೆಸ್ಪಿ ಅವರನ್ನು ಟೆಸ್ಟ್ ಜೊತೆಗೆ ಉಳಿದ ಎರಡೂ ಮಾದರಿಗಳಿಗೂ ಕೋಚ್ ಆಗಿ ನೇಮಿಸಿತ್ತು.

ಜೇಸನ್ ಗಿಲ್ಲೆಸ್ಪಿ ನೇತೃತ್ವದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದ ಬಳಿಕ ಅವರನ್ನೇ ಮೂರು ಮಾದರಿಗೂ ಕೋಚ್ ಆಗಿ ಮುಂದುವರೆಸಲು ಪಿಸಿಬಿ ಮುಂದಾಗಿತ್ತು. ಆದರೆ ವೇತನ ತಾರತಮ್ಯದಿಂದಾಗಿ ಈ ಜವಬ್ದಾರಿಯನ್ನು ತೆಗೆದುಕೊಳ್ಳಲು ಗಿಲ್ಲೆಸ್ಪಿ ಹಿಂದೇಟು ಹಾಕಿದ್ದರು. ಹಾಗಾಗಿ ಆಕಿಬ್ ಜಾವೇದ್ ಅವರನ್ನು ಸೀಮಿತ ಓವರ್ಗಳ ತಂಡದ ಹಂಗಾಮಿ ಕೋಚ್ ಆಗಿ ನೇಮಿಸಿರುವುದಾಗಿ ಪಿಸಿಬಿ ತಿಳಿಸಿದೆ.

ಜಿಂಬಾಬ್ವೆ ವಿರುದ್ಧದ ವೈಟ್ ಬಾಲ್ ಸರಣಿಯೊಂದಿಗೆ ಆಕಿಬ್ ಜಾವೆಬ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಪಿಸಿಬಿ ಮಾಹಿತಿ ನೀಡಿದೆ. ಆದಾಗ್ಯೂ, ಆಕಿಬ್ ಅವರನ್ನು ಮಧ್ಯಂತರ ಆಧಾರದ ಮೇಲೆ ಮಾತ್ರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದ್ದು, ಅವರು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯವರೆಗೆ ಮಾತ್ರ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಮುಗಿಯುವುದರೊಳಗೆ ಖಾಯಂ ಮುಖ್ಯ ಕೋಚ್ ಅನ್ನು ನೇಮಿಸುವ ಪ್ರಕ್ರಿಯೆ ನಡೆಯಲ್ಲಿದ್ದು, ಚಾಂಪಿಯನ್ಸ್ ಟ್ರೋಫಿ ಖಾಯಂ ಕೋಚ್ ಅನ್ನು ನೇಮಕ ಮಾಡಲಾಗುವುದು ಎಂದು ಪಿಸಿಬಿ ಹೇಳಿದೆ. ಇಷ್ಟೇ ಅಲ್ಲ ಆಕಿಬ್ ಜಾವೇದ್, ತಂಡದ ಹಂಗಾಮಿ ಕೋಚ್ ಹುದ್ದೆಯ ಜೊತೆಗೆ ಆಯ್ಕೆ ಸಮಿತಿಯ ಸಂಚಾಲಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ನೀಡಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನವು ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಬೇಕಾಗಿದೆ. ಇದಾದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ತ್ರಿಕೋನ ಏಕದಿನ ಸರಣಿಯನ್ನು ಆಡಬೇಕಿದೆ. ಈ ಸರಣಿಗಳಲ್ಲಿ ಜಾವೇದ್ ಅವರ ಕೆಲಸ ಪಿಸಿಬಿಗೆ ಮೆಚ್ಚುವಂತಿದ್ದರೆ, ಅವರನೇ ಖಾಯಂ ಕೋಚ್ ಆಗಿ ನೇಮಿಸುವ ಸಾಧ್ಯತೆಗಳು ಹೆಚ್ಚಿವೆ.