
ಮುಂಬರುವ ಏಷ್ಯಾಕಪ್ಗೆ 17 ಸದಸ್ಯರ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ತಂಡದ ನಾಯಕತ್ವ ಸಲ್ಮಾನ್ ಅಘಾ ಅವರ ಕೈಯಲ್ಲಿದ್ದರೆ, ಅನುಭವಿಗಳಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಜ್ವಾನ್ ಈ ತಂಡದಿಂದ ಹೊರಬಿದ್ದಿದ್ದಾರೆ. ಆದಾಗ್ಯೂ ಯುವ ಆಟಗಾರರಿಂದ ಕೂಡಿರುವ ಪಾಕ್ ತಂಡ, ಈ ಏಷ್ಯಾಕಪ್ನಲ್ಲಿ ಬಲಿಷ್ಠ ಭಾರತ ತಂಡವನ್ನು ಸೋಲಿಸಲಿದೆ ಎಂದು ಪಾಕ್ ಮುಖ್ಯ ಆಯ್ಕೆಗಾರ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಾಕಿಸ್ತಾನ ಆಯ್ಕೆದಾರ ಆಕಿಬ್ ಜಾವೇದ್, ಪ್ರಸ್ತುತ ಪಾಕಿಸ್ತಾನ ಟಿ20 ತಂಡವು ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಈ 17 ಸದಸ್ಯರ ತಂಡವು ಯಾವುದೇ ತಂಡವನ್ನು ಸೋಲಿಸುವಷ್ಟು ಬಲಿಷ್ಠವಾಗಿದೆ. ಆದರೆ ನಾವು ಅವರ ಮೇಲೆ ಒತ್ತಡ ಹೇರಬಾರದು. ಆದಾಗ್ಯೂ ಈ ತಂಡದಿಂದ ನನಗೆ ಬಹಳ ನಿರೀಕ್ಷೆಗಳಿವೆ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 13 ಪಂದ್ಯಗಳು ನಡೆದಿದ್ದು, ಅವುಗಳಲ್ಲಿ ಭಾರತ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ ಮೂರರಲ್ಲಿ ಮಾತ್ರ ಗೆದ್ದಿದೆ. ಒಂದು ಪಂದ್ಯ ಟೈ ಆಗಿತ್ತು. 2007 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಬಾಲ್ ಔಟ್‌ನಲ್ಲಿ ಗೆದ್ದಿತು. 2022 ರಲ್ಲಿ ಭಾರತ ವಿರುದ್ಧದ ಏಷ್ಯಾಕಪ್ ಸೂಪರ್-4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಜಯಗಳಿಸಿತ್ತು.

2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಂದು ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಬಾರಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇವುಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ತನ್ನ ಗುಂಪಿನ ಇತರ ಮೂರು ತಂಡಗಳ ವಿರುದ್ಧ ಪಂದ್ಯಗಳನ್ನು ಆಡಬೇಕಾಗುತ್ತದೆ.

ಪಾಕಿಸ್ತಾನದ ಪೂರ್ಣ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.