
ಪಾಕಿಸ್ತಾನ್ ತಂಡದ ಬ್ಯಾಟ್ಸ್ಮನ್ ಆಸಿಫ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಪಾಕ್ ಪರ 79 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಸಿಫ್ 33ನೇ ವಯಸ್ಸಿಗೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಲೀಗ್ಗಳಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಆಸಿಫ್ ಅಲಿ ಈ ಹಿಂದೆ ಪಾಕಿಸ್ತಾನ್ ಟಿ20 ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಏಷ್ಯಾಕಪ್ಗೆ ಆಯ್ಕೆ ಮಾಡಲಾದ ತಂಡದಲ್ಲಿ ಆಸಿಫ್ಗೆ ಸ್ಥಾನ ಸಿಕ್ಕಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಲು ಅವಕಾಶವಿತ್ತು.

ಆದರೆ ಇದೀಗ ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ಆಸಿಫ್ ಅಲಿ, ಪಾಕಿಸ್ತಾನದ ಜೆರ್ಸಿ ಧರಿಸಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವ. ಅಲ್ಲದೆ ಕ್ರಿಕೆಟ್ ಮೈದಾನದಲ್ಲಿ ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಹೆಮ್ಮೆಯ ಅಧ್ಯಾಯವಾಗಿದೆ. ಈ ಅಧ್ಯಾಯಕ್ಕೆ ವಿರಾಮವಿಡಲು ನಿರ್ಧರಿಸಿದ್ದೇನೆ ಎಂದು ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

2018 ರಲ್ಲಿ ಪಾಕಿಸ್ತಾನ್ ಪರ ಪಾದಾರ್ಪಣೆ ಮಾಡಿದ ಆಸಿಫ್ ಅಲಿ 21 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 16 ಇನಿಂಗ್ಸ್ ಆಡಿರುವ ಅವರು 3 ಅರ್ಧಶತಕಗಳೊಂದಿಗೆ 382 ರನ್ ಕಲೆಹಾಕಿದ್ದಾರೆ. ಹಾಗೆಯೇ 58 ಟಿ20 ಪಂದ್ಯಗಳಲ್ಲಿ 51 ಇನಿಂಗ್ಸ್ ಆಡಿರುವ ಆಸಿಫ್ 577 ರನ್ಗಳಿಸಲಷ್ಟೇ ಶಕ್ತರಾಗಿದ್ದರು.

ಇದೀಗ 33ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ಆಸಿಫ್ ಅಲಿ ಮುಂಬರುವ ದಿನಗಳಲ್ಲಿ ವಿಶ್ವದ ಪ್ರಮುಖ ಫ್ರಾಂಚೈಸಿ ಲೀಗ್ಗಳಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಆಸಿಫ್ ಪಾಕಿಸ್ತಾನ್ ಸೂಪರ್ ಲೀಗ್, ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್ಗಳಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.