ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ (PAK vs NZ) ನಡುವಣ ಟಿ20 ಸರಣಿ ಮುಗಿದಿದೆ. ನಿರೀಕ್ಷೆಯಂತೆ ಈ ಸರಣಿಯನ್ನು ಕಿವೀಸ್ ಪಡೆ 4-1 ಅಂತರದಿಂದ ಗೆದ್ದುಕೊಂಡಿದೆ. ಇತ್ತ ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಹೊಸ ಪಡೆಯೊಂದಿಗೆ ಕಣಕ್ಕಿಳಿದಿದ್ದ ಪಾಕಿಸ್ತಾನ್ ತಂಡ ಮತ್ತೊಮ್ಮೆ ಸೋಲಿನ ಸರಪಳಿಯಲ್ಲಿ ಸಿಲುಕಿಕೊಂಡಿದೆ.
ವಿಶೇಷ ಎಂದರೆ ಇದು ಪಾಕಿಸ್ತಾನ್ ತಂಡದ 5ನೇ ಸರಣಿ ಸೋಲು. ಕಳೆದ ಒಂದು ವರ್ಷದಿಂದ ಪಾಕಿಸ್ತಾನ್ ತಂಡವು ಒಟ್ಟು 8 ಟಿ20 ಸರಣಿಗಳನ್ನು ಆಡಿದೆ. ಈ ಸರಣಿಗಳಲ್ಲಿ ಗೆದ್ದಿದ್ದಕ್ಕಿಂತ ಸೋತಿರುವುದೇ ಹೆಚ್ಚು. ಹೀಗಾಗಿಯೇ ಇದೀಗ ಪಾಕಿಸ್ತಾನ್ ಕ್ರಿಕೆಟ್ ಅದಃಪತನದತ್ತ ಸಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ 2024 ರಿಂದ ಪಾಕಿಸ್ತಾನ್ ತಂಡವು ಕೇವಲ ಎರಡು ಟಿ20 ಸರಣಿಗಳನ್ನು ಮಾತ್ರ ಗೆದ್ದುಕೊಂಡಿದೆ. ಅದು ಕೂಡ ಐರ್ಲೆಂಡ್ ಹಾಗೂ ಝಿಂಬಾಬ್ವೆ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಐರ್ಲೆಂಡ್ ವಿರುದ್ಧ 2-1 ಅಂತರದಿಂದ ಗೆದ್ದಿದ್ದ ಪಾಕಿಸ್ತಾನ್, ಝಿಂಬಾಬ್ವೆ ವಿರುದ್ಧ ಒಂದು ಪಂದ್ಯದಲ್ಲಿ ಸೋತು 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಂಡಿತ್ತು.
ಇನ್ನು ನ್ಯೂಝಿಲೆಂಡ್ ವಿರುದ್ಧದ ಒಂದು ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ನ್ಯೂಝಿಲೆಂಡ್ ವಿರುದ್ಧ 4-1, ಸೌತ್ ಆಫ್ರಿಕಾ ವಿರುದ್ಧ 2-0, ಆಸ್ಟ್ರೇಲಿಯಾ ವಿರುದ್ಧ 3-0, ಇಂಗ್ಲೆಂಡ್ ವಿರುದ್ಧ 2-0 ಹಾಗೂ ಇದೀಗ ನ್ಯೂಝಿಲೆಂಡ್ ವಿರುದ್ಧ ಮತ್ತೊಮ್ಮೆ 4-1 ಅಂತರದಿಂದ ಸರಣಿ ಸೋತಿದೆ.
ಹಾಗೆಯೇ ಕಳೆದ 19 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡವು 15 ಪಂದ್ಯಗಳಲ್ಲಿ ಮುಗ್ಗರಿಸಿದೆ. ಇನ್ನು ಗೆದ್ದಿರುವುದು ದುರ್ಬಲ ತಂಡಗಳ ವಿರುದ್ಧ ಮಾತ್ರ. ಅಂದರೆ ಐರ್ಲೆಂಡ್ ಮತ್ತು ಝಿಂಬಾಬ್ವೆ ವಿರುದ್ಧ ಮಾತ್ರ ಪರಾಕ್ರಮ ಮೆರೆದಿದ್ದಾರೆ. ಹೀಗೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ್ ತಂಡಕ್ಕೆ ಮತ್ತೊಮ್ಮೆ ಮೇಜರ್ ಸರ್ಜರಿಯಾದರೂ ಅಚ್ಚರಿಪಡಬೇಕಿಲ್ಲ.