
ಐರ್ಲೆಂಡ್ ಹಾಗೂ ಯುಎಇ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 178 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಯುಎಇ ತಂಡ 121 ರನ್‌ಗಳಿಗೆ ಆಲೌಟ್ ಆಗಿ 57 ರನ್ಗಳಿಂದ ಸೋಲೊಪ್ಪಿಕೊಂಡಿತು. ಇನ್ನು ಇದೇ ಪಂದ್ಯದಲ್ಲಿ ಐರ್ಲೆಂಡ್ ತಂಡದ ನಾಯಕ ಪಾಲ್ ಸ್ಟಿರ್ಲಿಂಗ್ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದರು.

ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪಾಲ್ ಸ್ಟಿರ್ಲಿಂಗ್ ಅತಿ ಹೆಚ್ಚು ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಈಗಾಗಲೇ ಅಂತರರಾಷ್ಟ್ರೀಯ ಟಿ20ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ 159 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಸ್ಟರ್ಲಿಂಗ್ 160 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ರೋಹಿತ್ ದಾಖಲೆ ಮುರಿದಿದ್ದಾರೆ. ಆದಾಗ್ಯೂ ಸ್ಟರ್ಲಿಂಗ್ ಈ ದಾಖಲೆಯ ಪಂದ್ಯದಲ್ಲಿ ಕೇವಲ 8 ರನ್‌ಗಳಿಗೆ ಔಟಾದರು.

ಪಾಲ್ ಸ್ಟಿರ್ಲಿಂಗ್ ಇದುವರೆಗೆ 160 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 3,874 ರನ್ ಬಾರಿಸಿದ್ದಾರೆ. 26 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಬಾರಿಸಿರುವ ಪಾಲ್ ಸ್ಟಿರ್ಲಿಂಗ್ ಒಂದು ಶತಕ ಮತ್ತು 24 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ 140 ಸಿಕ್ಸರ್‌ಗಳು ಮತ್ತು 445 ಬೌಂಡರಿಗಳನ್ನು ಬಾರಿಸಿದ್ದಾರೆ.

ಜೂನ್ 15, 2009 ರಂದು ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದ ಪಾಲ್ ಸ್ಟಿರ್ಲಿಂಗ್, 2008 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಜುಲೈ 1, 2008 ರಂದು ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು.