ಬಾಬರ್ ಪರ ನಿಂತಿದ್ದೆ ಮುಳುವಾಯ್ತು; ದ್ವಿಶತಕ ವೀರನಿಗೆ ಒಪ್ಪಂದದ ಜೊತೆಗೆ ತಂಡದಿಂದಲೂ ಗೇಟ್ಪಾಸ್
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೊಸ ಕೇಂದ್ರ ಒಪ್ಪಂದದಲ್ಲಿ ಅನುಭವಿ ಆಟಗಾರ ಫಖರ್ ಜಮಾನ್ ಅವರನ್ನು ಕೈಬಿಟ್ಟಿದೆ. ಬಾಬರ್ ಅಜಮ್ ಅವರನ್ನು ತಂಡದಿಂದ ತೆಗೆದುಹಾಕಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಫಖರ್ ಜಮಾನ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಇದರಿಂದಾಗಿ ಅವರನ್ನು ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ಪ್ರವಾಸಗಳಿಂದಲೂ ಹೊರಗಿಡಲಾಗಿದೆ. ಫಖರ್ ಜಮಾನ್ ಪಾಕಿಸ್ತಾನಕ್ಕಾಗಿ 117 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಕೊಡುಗೆಯನ್ನು ಪರಿಗಣಿಸಿದರೆ ಈ ನಿರ್ಧಾರ ಆಘಾತಕಾರಿಯಾಗಿದೆ.
1 / 7
ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವುದರೊಂದಿಗೆ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಿರುವ ಪಾಕ್ ಕ್ರಿಕೆಟ್ ಮಂಡಳಿ ಕೆಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಂತೆ ತನ್ನ ವಿರುದ್ಧ ದನಿ ಎತ್ತಿದ್ದ ತಂಡದ ಅನುಭವಿ ಆಟಗಾರ ಫಖರ್ ಜಮಾನ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ.
2 / 7
ಪಾಕಿಸ್ತಾನದ ಪರ ಇದುವರೆಗೆ 117 ಪಂದ್ಯಗಳನ್ನಾಡಿದ್ದ ಎಡಗೈ ಬ್ಯಾಟ್ಸ್‌ಮನ್ ಫಖರ್ ಜಮಾನ್ ಹೊಸ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕಳೆದ ಕೇಂದ್ರ ಒಪ್ಪಂದದಲ್ಲಿ ಬಿ ವರ್ಗದಲ್ಲಿ ಸ್ಥಾನ ಪಡೆದಿದ್ದ ಫಖರ್ ಅವರನ್ನು ಈ ಬಾರಿ ಕೇಂದ್ರ ಒಪ್ಪಂದಿಂದ ಕೈಬಿಡಲಾಗಿದೆ. ಇದರೊಂದಿಗೆ ಫಖರ್ ಅವರನ್ನು ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗಿಡಲಾಗಿದೆ.
3 / 7
ಫಖರ್ ಅವರ ವಿರುದ್ಧ ಪಾಕ್ ಮಂಡಳಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವು ಇದ್ದು, ಮಂಡಳಿಯ ನಿರ್ಧಾರದ ವಿರುದ್ಧ ಮಾತನಾಡಿದ್ದ ಫಖರ್‌ಗೆ ಇದೀಗ ಆಘಾತ ಎದುರಾಗಿದೆ. ವಾಸ್ತವವಾಗಿ ಪಾಕಿಸ್ತಾನ ತಂಡ ಇತ್ತೀಚೆಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಿತ್ತು. ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲನುಭವಿಸಿತ್ತು.
4 / 7
ಇದಾದ ನಂತರ, ಪಾಕಿಸ್ತಾನ ಕ್ರಿಕೆಟ್‌ನ ಆಯ್ಕೆಗಾರರು ಬಾಬರ್ ಆಝಂ ಅವರಂತಹ ಸ್ಟಾರ್ ಆಟಗಾರನನ್ನು ತಂಡದಿಂದ ತೆಗೆದುಹಾಕಲು ನಿರ್ಧರಿಸಿದರು. ಈ ನಿರ್ಧಾರದ ವಿರುದ್ಧ ಫಖರ್ ಜಮಾನ್ ಧ್ವನಿ ಎತ್ತಿದ್ದರು. ಇದಾದ ನಂತರ ಫಖರ್ ವಿರುದ್ಧ ಗರಂ ಆಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟನೆ ಕೇಳಿ ಫಖರ್ ಅವರಿಗೆ ಶೋಕಾಸ್ ನೋಟಿಸ್ ಕೂಡ ಕಳುಹಿಸಿತ್ತು.
5 / 7
ಬಾಬರ್ ಅವರನ್ನು ತಂಡದಿಂದ ಕೈಬಿಟ್ಟ ಬಗ್ಗೆ ಅಸಮಾಧಾನ ತೊರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದ ಫಖರ್, ಬಾಬರ್ ಅವರನ್ನು ತಂಡದಿಂದ ಕೈಬಿಡುವ ಅಭಿಪ್ರಾಯ ಸಾಕಷ್ಟು ಆತಂಕಕಾರಿಯಾಗಿದೆ. ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ವಿರಾಟ್ ಕೊಹ್ಲಿಯನ್ನು ಭಾರತ ಕೈಬಿಡಲಿಲ್ಲ. 2020 ಮತ್ತು 2023 ರ ನಡುವೆ ವಿರಾಟ್ ಕೊಹ್ಲಿ ಅವರ ಸರಾಸರಿ 19.33, 28.21 ಮತ್ತು 26.50 ಆಗಿತ್ತು. ಆದಾಗ್ಯೂ ಅವರನ್ನು ತಂಡದಲ್ಲಿ ಆಡಿಸಲಾಗಿತ್ತು.
6 / 7
ಆದರೆ ನಮ್ಮ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊರಗಿಡಲು ನಾವು ಯೋಚಿಸುತ್ತಿದ್ದರೆ, ಅದು ತಂಡಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಬರೆದುಕೊಂಡಿದ್ದರು. ಆ ಬಳಿಕ ಫಖರ್ ಅವರ ಪೋಸ್ಟ್ಗೆ ವಿವರಣೆ ಕೇಳಿ, ಪಿಸಿಬಿ ನೋಟಿಸ್ ನೀಡಿದಲ್ಲದೆ, ತನ್ನ ನಿಲುವನ್ನು ಸ್ಪಷ್ಟಪಡಿಸಲು ಫಖರ್‌ಗೆ ಏಳು ದಿನಗಳ ಕಾಲಾವಕಾಶವನ್ನು ನೀಡಿತ್ತು.
7 / 7
ಫಖರ್ ಜಮಾನ್ ಇದುವರೆಗೆ ಪಾಕಿಸ್ತಾನ ತಂಡದ ಪರ 3 ಟೆಸ್ಟ್, 82 ಏಕದಿನ ಮತ್ತು 92 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 192 ರನ್, ಏಕದಿನದಲ್ಲಿ 3492 ರನ್ ಮತ್ತು ಟಿ20ಯಲ್ಲಿ 1848 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಏಕದಿನದಲ್ಲಿ 11 ಶತಕಗಳಿವೆ. ಏಕದಿನದಲ್ಲಿ ದ್ವಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ.