- Kannada News Photo gallery Cricket photos Mitchell Santner Took 862.3 overs to bag his first 5 haul in Tests
862 ಓವರ್ಗಳ ಬಳಿಕ ಸ್ಯಾಂಟ್ನರ್ ಸಾಧನೆ
Mitchell Santner: ನ್ಯೂಝಿಲೆಂಡ್ ತಂಡವು ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಈ ಸರಣಿ ಗೆಲುವಿನ ರೂವಾರಿ ನ್ಯೂಝಿಲೆಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್. ಏಕೆಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ ಕಬಳಿಸಿದ್ದ ಕಿವೀಸ್ ಸ್ಪಿನ್ನರ್, ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿದ್ದರು.
Updated on: Oct 27, 2024 | 11:30 AM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ 5 ವಿಕೆಟ್ಗಳನ್ನು ಕಬಳಿಸಲು ಅತೀ ಹೆಚ್ಚು ಓವರ್ಗಳನ್ನು ಎಸೆದ ನ್ಯೂಝಿಲೆಂಡ್ ಬೌಲರ್ ಯಾರೆಂದು ಕೇಳಿದರೆ ಇನ್ಮುಂದೆ ಮಿಚೆಲ್ ಸ್ಯಾಂಟ್ನರ್ ಹೆಸರೇಳಬಹುದು. ಏಕೆಂದರೆ ಸ್ಯಾಂಟ್ನರ್ ಟೆಸ್ಟ್ನಲ್ಲಿ ಮೊದಲ ಐದು ವಿಕೆಟ್ಗಳ ಗುಚ್ಛ ಪಡೆಯಲು ಎಸೆದಿರುವುದು ಬರೋಬ್ಬರಿ 862.3 ಓವರ್ಗಳನ್ನು ಎಂದರೆ ನಂಬಲೇಬೇಕು.

2015 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಮಿಚೆಲ್ ಸ್ಯಾಂಟ್ನರ್ ಕಳೆದ 47 ಇನಿಂಗ್ಸ್ಗಳಲ್ಲಿ ಒಮ್ಮೆಯೂ 5 ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಪುಣೆಯಲ್ಲಿ ನಡೆದ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಯಾಂಟ್ನರ್ ಸ್ಪಿನ್ ಮೋಡಿ ಮಾಡಿದರು.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 19.3 ಓವರ್ಗಳನ್ನು ಎಸೆದ ಮಿಚೆಲ್ ಸ್ಯಾಂಟ್ನರ್ ಕೇವಲ 53 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಟೆಸ್ಟ್ನಲ್ಲಿ ಅತ್ಯಧಿಕ ಓವರ್ಗಳ ಬಳಿಕ 5 ವಿಕೆಟ್ಗಳ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಪಾಕಿಸ್ತಾನದ ಬೌಲರ್ ಇಂತಿಕಾಬ್ ಆಲಂ. ಪಾಕ್ ಸ್ಪಿನ್ನರ್ ತಮ್ಮ ಮೊದಲ 5 ವಿಕೆಟ್ ಸಾಧನೆ ಮಾಡಲು ತೆಗೆದುಕೊಂಡ ಒಟ್ಟು ಓವರ್ಗಳ ಸಂಖ್ಯೆ 877. ಇದೀಗ 862.3 ಓವರ್ಗಳ ಬಳಿಕ 5 ವಿಕೆಟ್ ಕಬಳಿಸಿ ಮಿಚೆಲ್ ಸ್ಯಾಂಟ್ನರ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ವಿಶೇಷ ಎಂದರೆ ಮೊದಲ 5 ವಿಕೆಟ್ ಕಬಳಿಸಿದ ಬೆನ್ನಲ್ಲೇ ಸ್ಯಾಂಟ್ನರ್ ತಮ್ಮ ಕೆರಿಯರ್ನ ದ್ವಿತೀಯ 5 ವಿಕೆಟ್ಗಳ ಗುಚ್ಛವನ್ನೂ ಸಹ ಪಡೆದಿದ್ದಾರೆ. ಅಂದರೆ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 29 ಓವರ್ಗಳನ್ನು ಎಸೆದ ಕಿವೀಸ್ ಸ್ಪಿನ್ನರ್ 104 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪುಣೆ ಟೆಸ್ಟ್ನಲ್ಲಿ ಒಟ್ಟು 13 ವಿಕೆಟ್ ಉರುಳಿಸಿ ನ್ಯೂಝಿಲೆಂಡ್ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು ತಂದುಕೊಡುವಲ್ಲಿ ಮಿಚೆಲ್ ಸ್ಯಾಂಟ್ನರ್ ಯಶಸ್ವಿಯಾಗಿದ್ದಾರೆ.
