
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಶುಕ್ರವಾರ (ಜ.10) ಉತ್ತರದ ಪ್ರದೇಶದ ವೃಂದಾವನದಲ್ಲಿರುವ ಪ್ರೇಮಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯ ವೇಳೆ ಆಶೀರ್ವಾದ ಪಡೆದ ಕೊಹ್ಲಿಗೆ ಗುರೂಜಿ ಕೆಲ ವಿಶೇಷ ಸಲಹೆಗಳನ್ನು ನೀಡಿದ್ದಾರೆ.

ವಿರುಷ್ಕಾ ಜೋಡಿಯ ಭೇಟಿಗೆ ಸಂತೋಷ ವ್ಯಕ್ತಪಡಿಸಿದ ಪ್ರೇಮಾನಂದ ಜಿ ಮಹಾರಾಜ್, ಯಶಸ್ಸಿನ ಉತ್ತುಂಗಕ್ಕೇರಿದರೂ ನೀವಿಬ್ಬರೂ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವುದು ದೊಡ್ಡ ವಿಷಯ ಎಂದರು. ಅಲ್ಲದೆ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನು ಸಂತೈಸುವ ಮಾತುಗಳನ್ನಾಡಿದರು.

ಕ್ರಿಕೆಟ್ ಕೂಡ ಆಧ್ಯಾತ್ಮಿಕ ಅಭ್ಯಾಸ ಎಂದು ಬಣ್ಣಿಸಿದ ಪ್ರೇಮಾನಂದ ಜಿ ಮಹಾರಾಜ್, ಅಭ್ಯಾಸ ನಡೆಸುವುದನ್ನು ಎಂದಿಗೂ ಬಿಡಬಾರದು ಎಂದರು. ಅಲ್ಲದೆ ಅಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು. ಈ ಮೂಲಕ ನೀವೇನು ಸಾಧಿಸಬೇಕೆಂದು ಬಯಸುತ್ತಿರೋ ಅದನ್ನು ಮುಟ್ಟಬಹುದು ಎಂದು ಆಶೀರ್ವಾದ ಮಾಡಿದರು.

ಅಭ್ಯಾಸವನ್ನು ಬಲಪಡಿಸುವುದು ನಿಮ್ಮ ಕರ್ತವ್ಯ. ಅದು ಕ್ರೀಡೆಯಾಗಿದ್ದರೂ, ನಿಮ್ಮ ಆಟದಿಂದ ಇಡೀ ಭಾರತ ಸಂತೋಷಪಡುತ್ತದೆ. ಹೀಗಾಗಿ ನಿಮ್ಮ ಅಭ್ಯಾಸದಲ್ಲಿ ಯಾವುದೇ ಸಡಿಲಿಕೆ ಇರಬಾರದು. ಇದರ ಜತೆ ದೇವರ ಸ್ಮರಣೆ ಕೂಡ ಇರಲಿ. ಇದುವೇ ನಿಮ್ಮ ಸಾಧನ ಎಂದು ವಿರಾಟ್ ಕೊಹ್ಲಿಗೆ ಪ್ರೇಮಾನಂದ ಜಿ ಮಹಾರಾಜ್ ತಿಳಿಸಿದರು. ಈ ಮೂಲಕ ಕಳಪೆ ಫಾರ್ಮ್ನಿಂದ ಮರಳಲು ಕಠಿಣ ಅಭ್ಯಾಸವೇ ಮೂಲಮಂತ್ರ ಎಂಬುದನ್ನು ಒತ್ತಿ ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಸರಣಿ ಮುಕ್ತಾಯದ ಬೆನ್ನಲ್ಲೇ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾಗಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಈ ಹಿಂದೆ ಗುರೂಜಿಯನ್ನು ಭೇಟಿಯಾದ ಬಳಿಕ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಕಿಂಗ್ ಕೊಹ್ಲಿ ಕಡೆಯಿಂದ ಭರ್ಜರಿ ಬ್ಯಾಟಿಂಗ್ ಅನ್ನು ನಿರೀಕ್ಷಿಸಬಹುದು.
Published On - 10:30 am, Sat, 11 January 25