
Pro Kabaddi 2025: ಪ್ರೊ ಕಬಡ್ಡಿ ಲೀಗ್ ಸೀಸನ್ 12 ಆರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಅದರಂತೆ ಆಗಸ್ಟ್ 29 ರಿಂದ 12ನೇ ಆವೃತ್ತಿಯ ಕಬಡ್ಡಿ ಕದನ ಶುರುವಾಗಲಿದೆ. ಈ ಬಾರಿ ಕೂಡ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಲೀಗ್‌ನ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ತಿಳಿಸಿದೆ.

ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಅನ್ನು 12 ನಗರಗಳಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಕಳೆದ ಬಾರಿ ಹೈದರಾಬಾದ್ನ ಗಚಿಬೌಲಿ, ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ ಟೂರ್ನಿಯ ಅಂತಿಮ ಹಂತದ ಪಂದ್ಯಗಳಿಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣ ಆತಿಥ್ಯವಹಿಸಿತ್ತು.

ಆದರೆ ಈ ಬಾರಿ ಈ ಹಿಂದಿನಂತೆ ಎಲ್ಲಾ ತಂಡಗಳ ಹೋಮ್ ಟೌನ್ನಲ್ಲಿ ಪಂದ್ಯವನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಈ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳು ನಡೆಯುವ ಸಾಧ್ಯತೆಯಿದ್ದು, ಅಭಿಮಾನಿಗಳಿಗೆ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸುವ ಅವಕಾಶ ದೊರೆಯುವ ನಿರೀಕ್ಷೆಯಿದೆ.

ಇನ್ನು ಬಾರಿ ಬಲಿಷ್ಠ ಪಡೆಯನ್ನು ರೂಪಿಸಿರುವ ಬೆಂಗಳೂರು ಬುಲ್ಸ್ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 6 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಬುಲ್ಸ್ ಪಡೆಗೆ ಮತ್ತೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಬಿ.ಸಿ. ರಮೇಶ್ ಕೋಚಿಂಗ್ನಲ್ಲಿ ಮತ್ತೆ ಹಳೆಯ ಇತಿಹಾಸವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ ಬೆಂಗಳೂರು ಬುಲ್ಸ್.

ಬೆಂಗಳೂರು ಬುಲ್ಸ್ ತಂಡ: ಆಕಾಶ್ ಶಿಂಧೆ, ಮಹಿಪಾಲ್, ಶುಭಂ ಬಿಟಕೆ, ಮಂಜೀತ್, ಪಂಕಜ್, ಗಣೇಶ ಬಿ, ಪಿರಟಿ ಶ್ರೀಶಿವತೇಜೇಶ್, ಆಶಿಶ್ ಮಲಿಕ್, ಯೋಗೇಶ್ ದಹಿಯಾ, ಸಂಜಯ್ ಧುಲ್, ಅಂಕುಶ್ ರಾಠಿ, ಸತ್ಯಪ್ಪ ಮಟ್ಟಿ, ಮನೀಶ್, ಶುಭಂ ರಹಾಟೆ, ಲಕ್ಕಿ ಕುಮಾರ್, ದೀಪಕ್ ಎಸ್.ಧೀರಜ್, ಅಲಿರೇಝ ಮಿಝೈರ್ಯಾನ್, ಅಹ್ಮದ್ರೆಝ ಅಸ್ಗರಿ, ಅಮಿತ್ ಸಿಂಗ್ ಠಾಕೂರ್, ಸಾಹಿಲ್ ಸುಹಾಸ್ ರಾಣೆ, ಸಚಿನ್, ಚಂದ್ರನಾಯಕ್ ಎಂ.
Published On - 2:54 pm, Thu, 10 July 25