
ಐಪಿಎಲ್ ಹರಾಜಿನಲ್ಲಿ ಮುಂಬೈ ಹೊರತುಪಡಿಸಿ ಬೇರೆ ಯಾವುದೇ ತಂಡದಿಂದ ಬಿಡ್ ಆಗದ ಮತ್ತು ಕಳೆದ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಈಗ ಐಪಿಎಲ್ 2026 ರಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಕ್ವಿಂಟನ್ ಡಿ ಕಾಕ್ ಅದ್ಭುತ ಶತಕ ಬಾರಿಸಿದಲ್ಲದೆ ಅಜೇಯರಾಗಿ ಉಳಿದರು. ಡಿ ಕಾಕ್ ಕೇವಲ 53 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಅವರ ಈ ಶತಕದ ಇನ್ನಿಂಗ್ಸ್ನಲ್ಲಿ ಏಳು ಸಿಕ್ಸರ್ ಮತ್ತು ಏಳು ಬೌಂಡರಿಗಳು ಸೇರಿದ್ದವು.

ಇದು ಐಪಿಎಲ್ 2026 ರಲ್ಲಿ ಡಿ ಕಾಕ್ ಅವರ ಮೊದಲ ಶತಕ ಮತ್ತು ಅವರ ಐಪಿಎಲ್ ವೃತ್ತಿಜೀವನದ ಮೂರನೇ ಶತಕವಾಗಿದೆ. ಈ ಶತಕದೊಂದಿಗೆ ಡಿ ಕಾಕ್ ಪ್ರಮುಖ ದಾಖಲೆಯನ್ನು ನಿರ್ಮಿಸಿದ್ದು, ಐಪಿಎಲ್‌ನಲ್ಲಿ ಮೂರು ವಿಭಿನ್ನ ತಂಡಗಳ ಪರ ಶತಕಗಳನ್ನು ಬಾರಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಡಿ ಕಾಕ್ ಪಾತ್ರರಾಗಿದ್ದಾರೆ.

ಡಿ ಕಾಕ್ ಇದುವರೆಗೆ ಡೆಲ್ಲಿ ಡೇರ್‌ಡೆವಿಲ್ಸ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಈಗ ಮುಂಬೈ ಇಂಡಿಯನ್ಸ್ ಪರ ಶತಕಗಳನ್ನು ಬಾರಿಸಿದ್ದಾರೆ. ಈ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಡಿ ಕಾಕ್ ಅವರನ್ನು 2 ಕೋಟಿ ಮೂಲ ಬೆಲೆಗೆ ಖರೀದಿಸಿತು. ಇದೀಗ ಆಡುವ ಅವಕಾಶ ಪಡೆದ ಡಿ ಕಾಕ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

ಕ್ವಿಂಟನ್ ಡಿ ಕಾಕ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ 9 ನೇ ಶತಕವನ್ನು ಬಾರಿಸಿದ್ದಾರೆ. ಇದರ ಜೊತೆಗೆ ಡಿ ಕಾಕ್ ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೂಡ. ಹಾಗೆಯೇ ಈ ಶತಕದ ಮೂಲಕ ಡಿ ಕಾಕ್ ಟಿ20 ಶತಕಗಳ ವಿಷಯದಲ್ಲಿ ವಿರಾಟ್ ಕೊಹ್ಲಿ, ರಿಲೀ ರುಸ್ಸೋ ಮತ್ತು ಸಾಹಿಬ್ಜಾದಾ ಫರ್ಹಾನ್ ಅವರನ್ನು ಸರಿಗಟ್ಟಿದ್ದಾರೆ.